ಸ್ವಸ್ಥನಾಗಿ ಹೆತ್ತಬ್ಬೆ ಮಡಿಲು ಸೇರಿದ ಮಾನಸಿಕ ಅಸ್ವಸ್ಥ ಯುವಕ

ಉಡುಪಿ, ಅ.24: ಅಪರಿಚಿತ ಮನೋರೋಗಿ ಯುವಕನೊಬ್ಬ ಅನ್ನಾಹಾರ ಸೇವಿಸದೆ, ನಿತ್ರಾಣದಿಂದ ಬಳಲಿದ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸನಿಹ ಸೆ. 17 ರಂದು ಕಂಡು ಬಂದಿದ್ದನು. ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಈ ಯುವಕನನ್ನು ರಕ್ಷಿಸಿ ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲಿಸಿ ದ್ದರು. ಆಸ್ಪತ್ರೆಯ ಮನೋರೋಗ ತಜ್ಞರ ಸೂಕ್ತ ಚಿಕಿತ್ಸೆಯಿಂದ ಯುವಕನು ಗುಣಮುಖನಾಗಿದ್ದು, ಆತನ ವಿಳಾಸ ಪತ್ತೆಹಚ್ಚಿ ಹೆತ್ತವರ ಮಡಿಲು ಸೇರಿಸುವಲ್ಲಿ ವಿಶು ಶೆಟ್ಟಿ ಇದೀಗ ಯಶಸ್ವಿಯಾಗಿದ್ದಾರೆ.
ಯುವಕನನ್ನು ಬೆಂಗಳೂರು ಮಾಗಡಿಯ ಮೂರ್ತಿ (28) ಎಂದು ಗುರುತಿ ಸಲಾಗಿದೆ. ಈತ ಅನ್ನಾಹಾರ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದಾಗ, ವಿಶು ಶೆಟ್ಟಿ ಈತನಿಗೆ ಸ್ನಾನ ಮಾಡಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ನಿಧಾನ ಗತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಯುವಕ ನಿಂದ ಆಸ್ಪತ್ರೆಯ ಆಪ್ತ ಸಮಾಲೋಚಕ ನಾಗರಾಜ್, ಆತನ ಯುವಕನ ವಿಳಾಸ ಕಲೆ ಹಾಕಿದರು. ಬಳಿಕ ಹೆತ್ತವರಿಗೆ ವಿಷಯ ತಿಳಿಸಲಾಗಿ ಹಲವಾರು ತಿಂಗಳುಗಳಿಂದ ಮಗನ ಹುಡುಕಾಟದಲ್ಲಿದ್ದ ತಾಯಿಗೆ ವಿಷಯದು ಅತೀವ ಹರ್ಷವಾಗಿತ್ತು.
ಮಗನನ್ನು ನೋಡಲು ಉಡುಪಿಗೆ ಧಾವಿಸಲು ಸಹ ಹೆತ್ತವರ ಬಳಿ ಬಸ್ಸಿಗೆ ಹಣವಿರಲಿಲ್ಲ. ಪರಿಸ್ಥಿತಿ ತಿಳಿದ ವಿಶು ಶೆಟ್ಟಿ, ಯಾರಲ್ಲಾದರೂ ಸಾಲ ಮಾಡಿ ಬರುವಂತೆ, ಮುಂದಿನ ವ್ಯವಸ್ಥೆ ತಾನು ಮಾಡುವ ಭರವಸೆ ನೀಡಿದ್ದರು. ಅದರಂತೆ ಉಡುಪಿಗೆ ಬಂದ ಮೂರ್ತಿಯ ತಾಯಿ ಮಗನನ್ನು ಆಸ್ಪತ್ರೆಯಿಂದ ಅ.23ರಂದು ಬಿಡುಗಡೆಗೊಳಿಸಿ, ಬೆಂಗಳೂರಿನ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ತಾಯಿಯ ಪಾಲಿಗೆ ಈ ಬಾರಿಯ ದೀಪಾವಳಿ ವಿಶೇಷ ಬೆಳಕಿನ ಹಬ್ಬವಾದ ಖುಷಿಯಲ್ಲಿದ್ದಾರೆ. ತಮಗೆ ಆಪದ್ಬಾಂಧವನಾಗಿ ನೆರವಾದ ವಿಶು ಶೆಟ್ಟಿ ಅವರಿಗೆ ವುನದಾಳದ ಕೃತಜ್ಞತೆ ಸಲ್ಲಿಸಿದ್ದಾರೆ.
ಆಸ್ಪತ್ರೆಯ ವೈದ್ಯರು ಸಹ ಮಾನವೀಯತೆಯ ನೆಲೆಯಲ್ಲಿ ಒಟ್ಟು ಶುಲ್ಕದಲ್ಲಿ ವಿನಾಯಿತಿ ನೀಡಿದ್ದರು. ಉಳಿದ ಹಣವನ್ನು ವಿಶು ಶೆಟ್ಟಿ ಅವರ ಕೋರಿಕೆಯಂತೆ ಬೇರೆ ಬೇರೆ ಸಹೃದಯ ದಾನಿಗಳು ಭರಿಸಿದ್ದಾರೆ. ಅಂಬಲಪಾಡಿಯ ಸತೀಶ್ ಶೆಟ್ಟಿ ಎಂಬವರು ಮೂರ್ತಿ ಹಾಗೂ ಅವರ ಮನೆಮಂದಿಯ ಪ್ರಯಾಣದ ವೆಚ್ಚವನ್ನು ನೀಡಿ ಸಹಕರಿಸಿದ್ದಾರೆ ಎಂದು ವಿಶು ಶೆಟ್ಟಿ ತಿಳಿಸಿದರು.
ಚಿಕಿತ್ಸೆ ಪಡೆದು 20 ದಿನಗಳಲ್ಲಿ ವೈದ್ಯರು ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ಸೂಚಿಸಿದ್ದರು.ಮೂರ್ತಿಗೆ ಪುರ್ನವಸತಿ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಿದ್ದೆ.ಅವರಿಂದ ಸ್ಪಂದನೆ ದೊರೆಯಲಿಲ್ಲ. ಅಸಹಾಯಕರಿಗೆ, ವೃದ್ಧರಿಗೆ, ಮಹಿಳೆಯರಿಗೆ, ಮಾನಸಿಕ ಅಸ್ವಸ್ಥರಿಗೆ ಸರಿಯಾದ ನೆಲೆ ಕೊಡುವುದು ಸಂಬಂಧ ಪಟ್ಟ ಇಲಾಖೆಗಳ ಕರ್ತವ್ಯವಾಗಬೇಕು. ಈ ಪ್ರಕರಣ ಅಧಿಕಾರಿಗಳ ನಿರ್ಲಕ್ಷತನ ಹಾಗೂ ಮಾನವ ಹಕ್ಕಿನ ಉಲ್ಲಂಘನೆ ಎಂದು ಹೇಳಬಹುದು. ಇಂತಹ ಸಂದರ್ಭಗಳಲ್ಲಿ ಮೇಲಾಧಿಕಾರಿಗಳಾದರೂ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ.
-ವಿಶು ಶೆಟ್ಟಿ ಅಂಬಲಪಾಡಿ







