ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಠಾಕ್ರೆ ಕುಟುಂಬದ ಮೊದಲ ಸದಸ್ಯ ಆದಿತ್ಯ ಠಾಕ್ರೆ

ಮುಂಬೈ, ಅ.24: ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಮುಂಬೈನ ವರ್ಲಿ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಮಹಾರಾಷ್ಟ್ರ ವಿಧಾನಸಭೆಗೆ ಚೊಚ್ಚಲ ಪ್ರವೇಶ ಮಾಡಲಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಠಾಕ್ರೆ ಕುಟುಂಬದ ಮೊದಲ ಸದಸ್ಯನೆನಿಸಿಕೊಂಡಿದ್ದಾರೆ. 29 ವರ್ಷ ವಯಸ್ಸಿನ ಆದಿತ್ಯ ಠಾಕ್ರೆ ಅವರು ಮುಂದಿನ ಬಿಜೆಪಿ-ಶಿವಸೇನಾ ಮೈತ್ರಿ ಸರಕಾರದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಶಿವಸೇನಾದ ಯುವಘಟಕದ ಅಧ್ಯಕ್ಷನಾಗಿರುವ ಆದಿತ್ಯ ಠಾಕ್ರೆ ಅವರು ಕಾಂಗ್ರೆಸ್ ಪಕ್ಷದ ಸುರೇಶ್ ಮಾನೆ ಅವರನ್ನು 67 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ. ಆದಿತ್ಯ ಠಾಕ್ರೆ ಅವರ ತಂದೆ ಉದ್ಧವ್ ಠಾಕ್ರೆ ಅವರಾಗಲಿ ಅಥವಾ ತಾತ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರಾಗಲಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದಿತ್ಯ ಠಾಕ್ರೆ 89,248 ಮತಗಳನ್ನು ಪಡೆದಿದ್ದರೆ, ಸುರೇಶ್ ಮಾನೆಗೆ 21821 ಮತಗಳು ದೊರೆತಿವೆ.
2009ರಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದ ಆದಿತ್ಯ ಠಾಕ್ರೆ ಅವರು ಶಿವಸೇನಾದ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಈ ಮೊದಲು ವರ್ಲಿ ವಿಧಾನಸಭಾ ಕ್ಷೇತ್ರವನ್ನು ಶಿವಸೇನಾ ನಾಯಕ ದತ್ತಾ ನಲವಾಡೆ 1994ರಿಂದ 2004ರವರೆಗೆ ಪ್ರತಿನಿಧಿಸಿದ್ದರು. ಆದರೆ 2009ರಲ್ಲಿ ಈ ಕ್ಷೇತ್ರವು ಎನ್‌ಸಿಪಿ ಅಭ್ಯರ್ಥಿ ಸಚಿನ್ ಅಹಿರ್ ಅವರ ಪಾಲಾಗಿತ್ತು.







