ಮಿಲಿಟರಿ ವರ್ಲ್ಡ್ ಗೇಮ್ಸ್: ಶಿವಪಾಲ್ ಸಿಂಗ್‌ಗೆ ಚಿನ್ನ
ಕಂಚು ಗೆದ್ದ ಶೂಟರ್ ಗುರುಪ್ರೀತ್ ಸಿಂಗ್

ಹೊಸದಿಲ್ಲಿ, ಅ.24: ಭಾರತದ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ಚೀನಾದ ವುಹಾನ್‌ನಲ್ಲಿ ನಡೆಯುತ್ತಿರುವ ಏಳನೇ ಆವೃತ್ತಿಯ ಮಿಲಿಟರಿ ವರ್ಲ್ಡ್ ಗೇಮ್ಸ್‌ನಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿ ಉತ್ತಮ ಪ್ರದರ್ಶನ ಮುಂದುವರಿಸಿದರು. ಪುರುಷರ 25 ಮೀ. ಸೆಂಟರ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗುರುಪ್ರೀತ್ ಸಿಂಗ್ ಕಂಚು ಗೆದ್ದುಕೊಂಡರು.
ವಾಯುಪಡೆಯಲ್ಲಿ ಸೇವೆಯಲ್ಲಿರುವ ವಾರಣಾಸಿಯ 24ರ ಹರೆಯದ ಶಿವಪಾಲ್ 83.33 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದರು. ಪೊಲೆಂಡ್‌ನ ಕ್ರುಕೌಸ್ಕಿ(78.17 ಮೀ.)ಬೆಳ್ಳಿ ಹಾಗೂ ಶ್ರೀಲಂಕಾದ ರಣಸಿಂಘೆ ಜಗತ್(75.35)ಕಂಚಿನ ಪದಕ ಜಯಿಸಿದ್ದಾರೆ.
ಶಿವಪಾಲ್ ಈ ವರ್ಷದ ಎಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವೈಯಕ್ತಿಕ ಶ್ರೇಷ್ಠ ಪ್ರದರ್ಶನ(86.23 ಮೀ.)ದಿಂದ ಶಿವಪಾಲ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಚಾಂಗ್ವಾನ್‌ನಲ್ಲಿ ನಡೆದ 2018ರ ಐಎಸ್‌ಎಸ್‌ಎಫ್ ವರ್ಲ್ಡ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುಪ್ರೀತ್ ಒಟ್ಟು 585 ಸ್ಕೋರ್ ಗಳಿಸಿ ಮೂರನೇ ಸ್ಥಾನ ಪಡೆದರು.
ಭಾರತದ ಆನಂದನ್ ಗುಣಶೇಖರನ್ ಟೂರ್ನಿಯಲ್ಲಿ ಮೂರನೇ ಚಿನ್ನದ ಪದಕ ಜಯಿಸಿ ಗಮನ ಸೆಳೆದರು. ಈ ಮೊದಲು ವಿಕಲಚೇತನ ಪುರುಷರ 100 ಮೀ. ಹಾಗೂ 400 ಮೀ. ಐಟಿ1 ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದ ಆನಂದನ್ ಗುರುವಾರ ನಡೆದ ವಿಕಲಚೇತನ ಪುರುಷರ 200 ಮೀ. ಸ್ಪರ್ಧೆಯಲ್ಲಿ 24.31 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಕೊಲಂಬಿಯದ ಫಜಾರ್ಡೊ ಪಾರ್ಡೊ(26.11)ಬೆಳ್ಳಿ ಹಾಗೂ ಪೆರುವಿನ ಕಾಸಾ ಜೋಸ್(27.33)ಕಂಚಿನ ಪದಕ ಬಾಚಿಕೊಂಡರು. ಅನೀಶ್‌ಕುಮಾರ್ ಸುರೇಂದ್ರನ್ ಪಿಳ್ಳೈ ಹಾಗೂ ವೀರೇಂದರ್ ವಿಕಲಚೇತನ ಪುರುಷರ ಶಾಟ್‌ಪುಟ್ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದ್ದರು.
ಮಿಲಿಟರಿ ವರ್ಲ್ಡ್ ಗೇಮ್ಸ್ ಇದೇ ಮೊದಲ ಬಾರಿ ಚೀನಾದಲ್ಲಿ ನಡೆಯುತ್ತಿದೆ. 27 ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ 140ಕ್ಕೂ ಅಧಿಕ ದೇಶಗಳ 10,000ಕ್ಕೂ ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ.







