ಭಾರತ ತಂಡ ಪ್ರಕಟ, ಕೊಹ್ಲಿಗೆ ವಿಶ್ರಾಂತಿ, ಶಿವಂ ದುಬೆಗೆ ಅವಕಾಶ
ಬಾಂಗ್ಲಾದೇಶ ವಿರುದ್ಧ ಟ್ವೆಂಟಿ -20 ಸರಣಿ

ಹೊಸದಿಲ್ಲಿ, ಅ.24: ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರು ವುದನ್ನು ಮನಸ್ಸಿನಲ್ಲಿ ಟ್ಟುಕೊಂಡು ಬಾಂಗ್ಲಾದೇಶ ವಿರುದ್ಧ ಮುಂದಿನ ತಿಂಗಳು ಆರಂಭ ವಾಗಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲು ಎಂಎಸ್‌ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಗುರುವಾರ ನಿರ್ಧರಿಸಿದೆ.
ಟಿ-20 ಸರಣಿಗೆ ವಿಶ್ರಾಂತಿ ಪಡೆಯಲಿರುವ ಕೊಹ್ಲಿ ನ.14ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಾಪಸಾಗಲಿದ್ದಾರೆ.
ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಸೀಮಿತ ಓವರ್ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾಗೆ 15 ಸದಸ್ಯರುಗಳನ್ನು ಒಳಗೊಂಡ ಭಾರತ ಟಿ-20 ತಂಡದ ನಾಯಕತ್ವವಹಿಸಿಕೊಡಲಾಗಿದೆ.
ಮುಂಬೈನ 26ರ ಹರೆಯದ ಆಲ್‌ರೌಂಡರ್ ಶಿವಂ ದುಬೆ ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿಗೆ ಆಯ್ಕೆಯಾಗಿದ್ದು, ಚೊಚ್ಚಲ ಅಂತರ್‌ರಾಷ್ಟ್ರೀಯ ಪಂದ್ಯ ಆಡುವ ವಿಶ್ವಾಸದಲ್ಲಿದ್ದಾರೆ. 2017ರಲ್ಲಿ ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದ ದುಬೆ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟಿ-20 ತಂಡದ 15ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಪಾಂಡ್ಯ ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿ ಕೊಳ್ಳುತ್ತಿದ್ದಾರೆ.
ಪ್ರತಿಭಾವಂತ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಟಿ-20 ತಂಡದಲ್ಲಿ ಸೇರ್ಪಡೆಯಾಗಿದ್ದಾರೆ. ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗಿದ್ದಾರೆ.
ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಟಿ-20 ಅಂತರ್‌ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದಾರೆ. ಮುಂಬೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗುಜರಾತ್‌ನ ಆಲ್‌ರೌಂಡರ್ ರವೀಂದ್ರ ಜಡೇಜಗೆ ವಿಶ್ರಾಂತಿ ನೀಡಲಾಗಿದೆ. ದಿಲ್ಲಿ ವೇಗದ ಬೌಲರ್ ನವದೀಪ್ ಸೈನಿ ಫಿಟ್ನೆಸ್ ಸಮಸ್ಯೆಯ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ.
‘‘ಹಿರಿಯ ವೇಗದ ಬೌಲರ್ ಭುವನೇಶ್ವರ ಕುಮಾರ್ ವೆಸ್ಟ್‌ಇಂಡೀಸ್ ವಿರುದ್ಧದ ಮುಂಬರುವ ಸರಣಿಯ ವೇಳೆ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಲಿದ್ದಾರೆ’’ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಾಗಿ ಆಯ್ಕೆ ಮಾಡಲಾಗಿದ್ದ 15 ಸದಸ್ಯರುಗಳನ್ನು ಒಳಗೊಂಡ ತಂಡವನ್ನೇ ಉಳಿಸಿಕೊಳ್ಳಲಾಗಿದೆ.







