ಮಹಾರಾಷ್ಟ್ರ ಚುನಾವಣೆ ಅಧಿಕೃತ ಫಲಿತಾಂಶ ಪ್ರಕಟ: ಬಿಜೆಪಿ-ಶಿವಸೇನೆ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ

ಮುಂಬೈ/ಮಹಾರಾಷ್ಟ್ರ, ಅ.24: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಗುರುವಾರ ನಡೆದಿದ್ದು, ಮತದಾರ ಅಚ್ಚರಿಯ ಫಲಿತಾಂಶ ನೀಡಿದ್ದಾನೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನಾ ಮೈತ್ರಿಕೂಟವು 161 ಸ್ಥಾನಗಳನ್ನು ಪಡೆದು ಸಾಧಾರಣ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆಗೆ ಏರಿದೆ.
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಶಿವಸೇನಾ ಅಭ್ಯರ್ಥಿಗಳು 161 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟವು 98 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 105 ಸ್ಥಾನ ಗಳಿಸಿದರೆ, ಶಿವಸೇನೆ 56 ಕ್ಷೇತ್ರಗಳನ್ನು ಗೆದ್ದಿದೆ. ಎಐಎಂಐಎಂ 2 ಸ್ಥಾನಗಳನ್ನು ಗೆದ್ದಿದ್ದು, 27 ಕ್ಷೇತ್ರಗಳು ಇತರೆ/ ಪಕ್ಷೇತರರ ಪಾಲಾಗಿದೆ.
2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ 185 ಸ್ಥಾನಗಳು ದೊರೆತಿದ್ದು, ಈ ಸಲ 24 ಸ್ಥಾನಗಳು ಕಡಿಮೆಯಾಗಿವೆ. ಅದೇ ರೀತಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ತನ್ನ ಬಲವನ್ನು ಹೆಚ್ಚಿಸಿಕೊಂಡಿವೆ.
288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಕನಿಷ್ಠ 145 ಸ್ಥಾನಗಳ ಅಗತ್ಯವಿದೆ. ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆ ಪ್ರವೇಶಿಸಿರುವುದು ಹಲವು ದೃಷ್ಟಿಯಿಂದ ಗಮನಸೆಳೆದಿದೆ. ಆದಿತ್ಯ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮೈತ್ರಿಕೂಟದಲ್ಲಿ ಒಡಕಿನ ಧ್ವನಿಯನ್ನು ಎಬ್ಬಿಸಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ಭರ್ಜರಿ ಗೆಲುವು ಸಾಧಿಸಿದ್ದರಾದರೂ, ಫಡ್ನವೀಸ್ ಸಂಪುಟದ ಕೆಲವು ಸಚಿವರು ಸೋಲುಂಡಿರುವುದು ಬಿಜೆಪಿಗೆ ಮುಖಭಂಗವುಂಟು ಮಾಡಿದೆ.
ಎರಡೂ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿಯು ರಾಷ್ಟ್ರೀಯವಾದ, ಎನ್‌ಆರ್‌ಸಿ, ಸಂವಿಧಾನದ 370ನೇ ವಿಧಿ ರದ್ದು ಮುಂತಾದ ರಾಷ್ಟ್ರೀಯ ವಿಷಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆಯೆದುರಿಸಿದ್ದು, ಸ್ಥಳೀಯ ಸಮಸ್ಯೆ ನಿರ್ಲಕ್ಷಿಸಿರುವುದು ಅದಕ್ಕೆ ಹಿನ್ನಡೆಯುಂಟು ಮಾಡಿದೆಯೆಂದು ರಾಜಕೀಯ ವೀಕ್ಷಕರು ಅಭಿಪ್ರಾಯಿಸಿದ್ದಾರೆ. ಉದ್ಯೋಗನಷ್ಟ, ಜಿಎಸ್‌ಟಿ ಹಾಗೂ ನಗದು ಅಮಾನ್ಯತೆ, ಆರ್ಥಿಕ ಹಿಂಜರಿತದ ಪರಿಣಾಮಗಳು ಮತದಾರರ ಮೇಲೆ ಬೀರಿರುವುದು ಆಡಳಿತವಿರೋಧಿ ಅಲೆಯುಂಟಾಗಲು ಇನ್ನೊಂದು ಕಾರಣವೆನ್ನಲಾಗಿದೆ.







