ಅಲಯೆನ್ಸ್ ವಿವಿಯ ಡಾ.ಅಯ್ಯಪ್ಪ ದೊರೆ ಹತ್ಯೆ ಪ್ರಕರಣ: ಮಹಿಳೆಯರಿಬ್ಬರು ಸೇರಿ 7 ಮಂದಿ ಬಂಧನ

ಡಾ.ಅಯ್ಯಪ್ಪ ದೊರೆ
ಬೆಂಗಳೂರು, ಅ.25: ಅಲಯೆನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪದೊರೆ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ, 7 ಮಂದಿಯನ್ನು ಆರ್.ಟಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಯಮಹಲ್ ನಿವಾಸಿ ಕಾಂತರಾಜು (28), ಸುನಿಲ್ ರಾವ್,(31), ಫಯಾಝ್(29), ವಿನಯ್ (24), ಅರುಣ್ ಕುಮಾರ್, ರಿಝ್ವಾನಾ(38), ಸಲ್ಮಾ (28) ಬಂಧಿತ ಆರೋಪಿಗಳು ಎಂದು ಉತ್ತರ ಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಕಾಂತರಾಜು, ಸುನಿಲ್ ರಾವ್, ಫಯಾಝ್ ಹಾಗೂ ವಿನಯ್ ಅವರು, ಅಯ್ಯಪ್ಪದೊರೆ ಕೊಲೆ ಕೃತ್ಯದಲ್ಲಿ ಪ್ರಮುಖ ಆರೋಪಿ ಸೂರಜ್ ಸಿಂಗ್ ಜೊತೆ ಕೈಜೋಡಿಸಿದ್ದರು. ಜತೆಗೆ ಕೊಲೆ ಕೃತ್ಯಕ್ಕೆ ಅರುಣ್ ಕುಮಾರ್, ರಿಝ್ವಾನಾ ಹಾಗೂ ಸಲ್ಮಾ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿರುವುದು ತನಿಖೆಯಲ್ಲಿ ಕಂಡುಬಂದಿರುವುದರಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಅಯ್ಯಪ್ಪ ದೊರೆ ಕೊಲೆ ಕೃತ್ಯದಲ್ಲಿ ಅಲಯನ್ಸ್ ಕುಲಪತಿ ಸುಧೀರ್ ಅಂಗೂರ್, ಸೂರಜ್ ಸಿಂಗ್ ಸೇರಿದಂತೆ, 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲಯೆನ್ಸ್ ಶಿಕ್ಷಣ ಸಂಸ್ಥೆ ಮೇಲಿನ ಹಿಡಿತ ಸಾಧಿಸಲು ಅಯ್ಯಪ್ಪ ದೊರೆ ಅವರ ಕೊಲೆ ನಡೆಸಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.





