ಮರದೂ ಫ್ಲ್ಯಾಟ್ಸ್: ಮಾಲಕರಿಗೆ 25 ಲಕ್ಷ ರೂ. ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ಸೂಚನೆ

ತಿರುವನಂತಪುರಂ, ಅ.25: ಕೊಚ್ಚಿಯ ಮರದೂ ಪ್ರದೇಶದಲ್ಲಿ ಸಿಆರ್‌ಝೆಡ್ ಪ್ರದೇಶದಲ್ಲಿ ನಿರ್ಮಿಸಿದ್ದ 300ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ನೆಲಸಮಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಈ ಫ್ಲ್ಯಾಟ್‌ಗಳ ಮಾಲಕರಿಗೆ 25 ಲಕ್ಷ ರೂ. ಮಧ್ಯಂತರ ಪರಿಹಾರ ಒದಗಿಸಬೇಕೆಂದು ಕೇರಳ ಸರಕಾರಕ್ಕೆ ಸೂಚಿಸಿದೆ.
ಈಗಾಗಲೇ ಒಟ್ಟು 10 ಕೋಟಿ ರೂ. ಮೊತ್ತದ ಪರಿಹಾರ ನೀಡಲಾಗಿದೆ ಎಂದು ಕೇರಳ ಸರಕಾರ ತಿಳಿಸಿದೆ. ಕರಾವಳಿ ನಿಯಂತ್ರಣ ವಲಯ(ಸಿಆರ್‌ಝೆಡ್)ದಲ್ಲಿ ನಿರ್ಮಿಸಲಾಗಿರುವ 300ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ನೆಲಸಮಗೊಳಿಸಲು ಸುಪ್ರೀಂಕೋರ್ಟ್ ಸೂಚಿಸಿತ್ತು. ಇದನ್ನು ವಿರೋಧಿಸಿದ್ದ ಬಿಲ್ಡರ್ ಅಸೋಸಿಯೇಷನ್‌ನ ಒಕ್ಕೂಟ, ಇವುಗಳನ್ನು ಇತರ ಬಳಕೆಗೆ ಉಪಯೋಗಿಸಬಹುದು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂ, ಈ ಹಿಂದಿನ ಆದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ. ನಮ್ಮ ಆದೇಶ ಅಂತಿಮ ಎಂದು ತಿಳಿಸಿದೆ. ಅಲ್ಲದೆ ಫ್ಲ್ಯಾಟ್‌ನ ಮಾಲಕರು ಬಿಲ್ಡರ್‌ಗಳಿಗೆ ಹಣ ಪಾವತಿಸಿದ್ದಕ್ಕೆ ದಾಖಲೆ ಪತ್ರ ಒದಗಿಸುವಂತೆ ಏಕಸದಸ್ಯ ಸಮಿತಿಗೆ ಸೂಚಿಸಿದೆ.
ಕೆಲವರು ತಾವು ಫ್ಲ್ಯಾಟ್‌ಗೆ 25 ಲಕ್ಷ ರೂ.ಗೂ ಅಧಿಕ ಮೊತ್ತ ಪಾವತಿಸಿರುವುದಾಗಿ ಹೇಳಿದ್ದರು. ಫ್ಲ್ಯಾಟ್‌ನ ಮಾಲಕರಿಗೆ ತಲಾ 25 ಲಕ್ಷ ರೂ. ಮಧ್ಯಂತರ ಪರಿಹಾರ ಪಾವತಿಸಿ, ಈ ಮೊತ್ತವನ್ನು ಬಿಲ್ಡರ್‌ಗಳಿಂದ ವಸೂಲಿ ಮಾಡುವಂತೆ ಕಳೆದ ತಿಂಗಳು ಸುಪ್ರೀಂಕೋರ್ಟ್ ಆದೇಶಿಸಿತ್ತು.





