ನಕ್ಸಲ್ ಚಟುವಟಿಕೆ ಆರೋಪ: ಸ್ವರಾಜ್ ಇಂಡಿಯಾ ರಾಜ್ಯ ಕಾರ್ಯದರ್ಶಿ, ಪತ್ರಕರ್ತ ನರಸಿಂಹಮೂರ್ತಿ ಬಂಧನ

ರಾಯಚೂರು, ಅ. 25: ಇಪ್ಪತ್ತೈದು ವರ್ಷಗಳ ಹಿಂದೆ ದಾಖಲಾಗಿದ್ದ ನಕ್ಸಲ್ ಚಟುವಟಿಕೆಗಳ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಪತ್ರಕರ್ತ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯದರ್ಶಿ ದೊಡ್ಡಪಾಳ್ಯ ನರಸಿಂಹಮೂರ್ತಿ ಎಂಬವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ದೊಡ್ಡಿಪಾಳ್ಯದ ಬಂಧಿತ ಆರೋಪಿ ವಿನೋದ್ ಯಾನೆ ದೊಡ್ಡಿಪಾಳ್ಯ ನರಸಿಂಹಮೂರ್ತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ.6ರ ವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಗೊತ್ತಾಗಿದೆ.
ಅ.24ರ ಗುರುವಾರ ರಾಯಚೂರು ನಗರದಲ್ಲಿ ಗೌರಿಲಂಕೇಶ್ ‘ನ್ಯಾಯಪಥ’ ಪತ್ರಿಕೆಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ದೊಡ್ಡಿಪಾಳ್ಯ ನರಸಿಂಹಮೂರ್ತಿ ತೆರಳಿದ್ದ ವೇಳೆ ಪೊಲೀಸರ ವಶಕ್ಕೆ ಪಡೆದಿದ್ದು, ಶುಕ್ರವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನರಸಿಂಹಮೂರ್ತಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ರಾಯಚೂರು ತಾಲೂಕಿನ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಮೂರು, ರಾಯಚೂರಿನ ನೇತಾಜಿನಗರ ಒಂದು ಸೇರಿ ಒಟ್ಟು 4 ಪ್ರಕರಣಗಳನ್ನು ದಾಖಲಿಸಲಾಗಿದೆ. ಇಪ್ಪತ್ತೈದು ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಹೊರಡಿಸಿದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.
ಉದ್ದೇಶಪೂರ್ವಕ ಬಂಧನ: ‘ದೊಡ್ಡಿಪಾಳ್ಯ ನರಸಿಂಹಮೂರ್ತಿ ಪತ್ರಕರ್ತರಾಗಿದ್ದು, ಸ್ವರಾಜ್ ಇಂಡಿಯಾ ಪಕ್ಷದ ಚುಟುವಟಿಕೆಗಳಲ್ಲಿ ತೊಡಗಿದ್ದಾರೆ. ಅವರನ್ನು 25 ವರ್ಷಗಳ ಹಿಂದೆ ದಾಖಲಾದ ಪ್ರಕರಣಗಳಲ್ಲಿ ಈಗ ಬಂಧಿಸಿರುವುದು ಉದ್ದೇಶಪೂರ್ವಕ ಎನಿಸುತ್ತಿದೆ. ಶೀಘ್ರವೇ ಅವರಿಗೆ ಕೋರ್ಟ್ ಜಾಮೀನು ನೀಡುವ ನಿರೀಕ್ಷೆ ಇದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಜಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದ್ದಾರೆ.
‘ಗೌರಿ ಲಂಕೇಶ್ ಅವರ ನ್ಯಾಯಪಥ ಪತ್ರಿಕೆ ಮೂಲಕ ರಾಜ್ಯದಲ್ಲಿ ಪರ್ಯಾಯ ಮಾಧ್ಯಮ ಕಟ್ಟುವ ಪ್ರಯತ್ನ ಹಾಗೂ ಸಾಮಾಜಿಕ ಹೋರಾಟಗಳನ್ನು ಹತ್ತಿಕ್ಕುವ ದುರುದ್ದೇಶದಿಂದಲೇ ಇಪ್ಪತ್ತೈದು ವರ್ಷಗಳ ಹಳೆಯ ಪ್ರಕರಣದಲ್ಲಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಂಧಿಸಲಾಗಿದೆ. ಇದರ ಹಿಂದೆ ರಾಜ್ಯ ಸರಕಾರದ ವ್ಯವಸ್ಥಿತ ಷಡ್ಯಂತ್ರ ಅಡಗಿದೆ’
-ಕುಮಾರ್ ಸಮತಳ, ಜನಶಕ್ತಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ







