ಚಿಕ್ಕಮಗಳೂರಿನಲ್ಲಿ ಬಿರುಗಾಳಿ ಮಳೆ: ಧರೆಗುರುಳಿದ ಮರಗಳು, ಕೊಚ್ಚಿ ಹೋದ ಸೇತುವೆ
►ಜನಜೀವನ ಅಸ್ತವ್ಯಸ್ತ ► ಮಲೆನಾಡಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತ

ಚಿಕ್ಕಮಗಳೂರು, ಅ.25: ಕಾಫಿನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಮತ್ತಷ್ಟು ಬಿರುಸುಗೊಂಡಿದ್ದು, ಜಿಲ್ಲೆಯ ಹಲವೆಡೆ ಮರಗಳು ಧರೆಗುರುಳಿ, ಮನೆಯ ಹೆಂಚು, ಶೀಟುಗಳು ಹಾರಿ ಹೋಗಿರುವ ಘಟನೆಗಳು ವರದಿಯಾಗಿವೆ. ಜಿಲ್ಲೆಯಲ್ಲಿ ವರುಣನ ಆರ್ಭಟ ಮತ್ತಷ್ಟು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಚಿಕ್ಕಮಗಳೂರು ಹಾಗೂ ಬಯಲುಸೀಮೆ ಭಾಗದ ಕಡೂರು, ತರೀಕೆರೆ ತಾಲೂಕುಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತುಂತುರು ಮಳೆ ಹಾಗೂ ಭಾರೀ ಗಾಳಿ ಬೀಸಿದ್ದು, ಈ ವೇಳೆ ಕೆಲ ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಅಲ್ಲದೇ ಕೆಲ ಮನೆಗಳ ಹೆಂಚು, ಶೀಟುಗಳು ಹಾರಿಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟ್, ಬಾಳೂರು ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ ರಾಮಚಂದ್ರೇಗೌಡ ಎಂಬವರ ಮನೆಯ ಹೆಂಚುಗಳು, ಸಮೀಪದ ಅತ್ತಿಗೆರೆ ಗ್ರಾಮದಲ್ಲಿ ಅಶ್ವಥ್ ಎಂಬವರ ಮನೆಯ ಹೆಂಚು ಶೀಟುಗಳು ಹಾರಿಹೋಗಿವೆ. ಕೊಟ್ಟಿಗೆಹಾರ ಗ್ರಾಮದ ಹಲವೆಡೆ ಹಲವು ಮನೆಗಳ ಹೆಂಚು, ಶೀಟುಗಳು ಬಿರುಗಾಳಿಯಿಂದಾಗಿ ಹಾರಿ ಹೋಗಿ ಭಾರೀ ನಷ್ಟ ಸಂಭವಿಸಿದೆ.
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಹಳ್ಳದಲ್ಲಿ ಧಾರಾಕಾರ ನೀರು ಹರಿದ ಪರಿಣಾಮ ಕೊಟ್ಟಿಗೆಹಾರದಿಂದ ಮಾಗುಂಡಿ, ಬಾಳೆಹೊನ್ನೂರು ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಾಲೂಕಿನಲ್ಲಿ ಹೇಮಾವತಿ ನದಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು.
ತಾಲೂಕಿನ ಜಾವಳಿ ಗ್ರಾಮದಲ್ಲಿ ಬೆಳಗ್ಗೆ ವಿದ್ಯುತ್ ಕಂಬವೊಂದು ಮನೆಯ ಮೇಲೆ ಬಿದ್ದಿದ್ದು, ಈ ವೇಳೆ ಮನೆಯಲ್ಲಿದ್ದ ಶಿಕ್ಷಕಿ ತಾರಾ ಎಂಬವರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಬಂಕೇನಹಳ್ಳಿ ಗ್ರಾಮದಲ್ಲಿ ಕೂಡಳ್ಳಿ-ಚೇಗು ಗ್ರಾಮಗಳ ನಡುವೆ ಹರಿಯುತ್ತಿದ್ದ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ಕಾಲು ಸಂಕ ಕೊಚ್ಚಿ ಹೋಗಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಸಂಪರ್ಕಕ್ಕೆ ಇದ್ದ ಸೇತುವೆ ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿತ್ತು.
ಕೊಪ್ಪ ತಾಲೂಕಿನ ಬಾಳೆಕೊಪ್ಪಎಂಬಲ್ಲಿ ಭಾರೀ ಗಾತ್ರದ ಮರ ಧರೆಗುರುಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ವೇಳೆ ರಸ್ತೆಯ ಮೇಲಿದ್ದ ಹಸುವಿನ ಮೇಲೆ ಮರಬಿದ್ದ ಪರಿಣಾಮ ಹಸು ಸ್ಥಳದಲ್ಲೇ ಅಸುನೀಗಿದೆ. ಉಳಿದಂತೆ ಬಾಳೆಹೊನ್ನೂರು, ಜಯಪುರ, ಕೊಪ್ಪ, ಶೃಂಗೇರಿ, ಕಿಗ್ಗಾ, ಚಿಕ್ಕಮಗಳೂರು, ಕಡೂರು, ತರೀಕೆರೆ, ಕಳಸ, ಕುದುರೆಮುಖ ಕೆರೆಕಟ್ಟೆ ಮತ್ತಿತರ ಕಡೆಗಳಲ್ಲಿ ಸಂಜೆಯಿಂದ ಭಾರೀ ಮಳೆ ಸುರಿಯಲಾರಂಭಿಸಿದ್ದು, ಮಲೆನಾಡಿನ ಜನತೆ ಆತಂಕಪಡುವಂತಾಗಿದೆ.
ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ, ಭದ್ರಾ, ಹೇಮಾವತಿ, ಜಪಾವತಿ, ವೇದಾವತಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿಲ್ಲ.







