ಬಿಜೆಪಿ ಅಥವಾ ಕಾಂಗ್ರೆಸ್ ಜೆಜೆಪಿಗೆ ಅಸ್ಪೃಶ್ಯವಲ್ಲ: ದುಷ್ಯಂತ್

ಹೊಸದಿಲ್ಲಿ,ಅ.25: ಅತಂತ್ರ ವಿಧಾನಸಭೆಯುಂಟಾಗಿರುವ ಹರ್ಯಾಣದಲ್ಲಿ ಸರಕಾರ ರಚನೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪೈಪೋಟಿ ನಡೆಸುತ್ತಿರುವಂತೆಯೇ ಬಿಜೆಪಿಯಾಗಲಿ ಅಥವಾ ಕಾಂಗ್ರೆಸ್ ಆಗಲಿ ತನಗೆ ಅಸ್ಪಶ್ಯವಲ್ಲ. ತನ್ನ ಪಕ್ಷದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೂ ಬೆಂಬಲ ನೀಡಲು ತಾನು ಸಿದ್ಧ ಎಂದು ಜನನಾಯಕ ಜನತಾ ಪಕ್ಷ (ಜೆಜಿಪಿ)ದ ವರಿಷ್ಠ ದುಷ್ಯಂತ ಚೌಟಾಲಾ ಹೇಳಿದ್ದಾರೆ. ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದಿರುವ ಜೆಜೆಪಿಯು ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ನೂತನ ಸರಕಾರ ರಚನೆಯಲ್ಲಿ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ.
ಹತ್ತು ಮಂದಿ ಶಾಸಕರನ್ನೊಳಗೊಂಡ ಜೆಜೆಪಿ ಶಾಸಕಾಂಗ ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಥವಾ ಕಾಂಗ್ರೆಸ್ ಇವೆರಡರಲ್ಲಿ ಯಾವುದನ್ನು ಜೆಜೆಪಿ ಬೆಂಬಲಿಸಬೇಕು ಎಂಬ ಬಗ್ಗೆ ಆಯ್ಕೆಯನ್ನು ತನ್ನ ಮುಕ್ತವಾಗಿಟ್ಟಿರುವುದಾಗಿ ಅವರು ಹೇಳಿದ್ದಾರೆ.
ಆದರೆ ಈ ವಿಷಯವಾಗಿ ತಾನು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಚರ್ಚಿಸಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿಗೆ 40 ಸ್ಥಾನಗಳನ್ನು ಗೆದ್ದಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ಗೆ ಮೂವತ್ತು ಸ್ಥಾನಗಳನ್ನು ದೊರೆತಿವೆ. ಈ ಮಧ್ಯೆ ಕೆಲವು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿವೆ. ಹರ್ಯಾಣದಲ್ಲಿ ಸರಕಾರ ರಚನೆಗೆ ಬೇಕಾದ ಸರಳಬಹುಮತಕ್ಕೆ 46 ಶಾಸಕರ ಬೆಂಬಲದ ಅಗತ್ಯವಿದೆ.







