‘ಆರೋಗ್ಯಕ್ಕಾಗಿ ಆಯುರ್ವೇದದ ನಡಿಗೆ’ ಕಾಲ್ನಡಿಗೆ ಜಾಥ

ಉಡುಪಿ, ಅ.25: ಆಯುರ್ವೇದ ದಿನಾಚರಣೆಯ ಪ್ರಯುಕ್ತ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ವತಿ ಯಿಂದ ಆರೋಗ್ಯಕ್ಕಾಗಿ ಆಯುರ್ವೇದದ ನಡಿಗೆ ಎಂಬ ಶೀರ್ಷಿಕೆಯಲ್ಲಿ ಕಾಲ್ನಡಿಗೆ ಜಾಥಾವನ್ನು ಅ.25ರಂದು ಆಯೋಜಿಸಲಾಗಿತ್ತು.
ಕಾಲೇಜಿನ ಧನ್ವಂತರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡ ಜಾಥಾವು ಉದ್ಯಾವರ ಗುಡ್ಡೆಅಂಗಡಿ, ಶಂಭುಕಲ್ಲು, ಮೇಲ್ಪೇಟೆ ಮಾರ್ಗವಾಗಿ ಉದ್ಯಾವರ ಅಂಚೆ ಕಛೇರಿ ತನಕ ಮುಂದುವರಿದು ಅದೇ ಮಾರ್ಗವಾಗಿ ಹಿಂದಿರುಗಿತು.
ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರನ್ನೊಳಗೊಂಡ 15 ವಿದ್ಯಾರ್ಥಿಗಳು, ಬೋಧಕ ವೃಂದದ ತಂಡವು ಆಯುರ್ವೇದ ಕುರಿತ ವಿವಿಧ ಜಾಗೃತಿ ಫಲಕಗಳ ಮೂಲಕ ಸಾರ್ವಜನಿಕರಲ್ಲಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿತು.
ಕಾರ್ಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಡಾ.ಶ್ರೀಲತಾ ಕಾಮತ್ ಟಿ., ಎಸ್‌ಡಿಎಂ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಆರ್., ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕ ಡಾ.ರಜನೀಶ್ ವಿ. ಗಿರಿ, ದ್ರವ್ಯಗುಣ ವಿಭಾಗದ ಸಹಪ್ರಾಧ್ಯಾಪಕಿ ಡಾ. ಸುಮಾ ವಿ. ಮಲ್ಯ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ.ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ.ಸುಚೇತ ಕುಮಾರಿ, ವಿದ್ಯಾರ್ಥಿ ಕ್ಷೇಮಾಭಿ ವೃದ್ಧಿಯ ಸಹಾಯಕ ಡೀನ್ ಡಾ.ವೀರ ಕುಮಾರ ಕೆ. ಉಪಸ್ಥಿತರಿದ್ದರು. ಶರೀರ ಕ್ರಿಯಾ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಮೊಹರೆರ್ ಸ್ವಾಗತಿಸಿದರು. ಅಗಮ ತಂತ್ರ ವಿಭಾಗದ ಸಹಪ್ರಾಧ್ಯಾಪಕ ಡಾ.ಶ್ರೀನಿಧಿ ಬಲ್ಲಾಳ್ ವಂದಿಸಿದರು. ಸಂಹಿತ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲಿಖಿತಾ ಡಿ.ಎನ್. ಕಾರ್ಯ ಕ್ರಮ ನಿರೂಪಿಸಿದರು







