ಕರಾವಳಿ ಕಾವಲು ಪಡೆಯಿಂದ ಅಂಕೋಲ ಬಳಿ ಮಹಾರಾಷ್ಟ್ರ ಬಾರ್ಜ್‌ನಲ್ಲಿದ್ದ 9 ಮಂದಿಯ ರಕ್ಷಣೆ

ಉಡುಪಿ, ಅ.25: ಅರಬಿಸಮುದ್ರದಲ್ಲಿ ವಾಯುಭಾರ ಕುಸಿತದಿಂದುಂಟಾದ ಭಾರೀ ಅಲೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪದಲ್ಲಿ ಅಪಾಯಕ್ಕೆ ಸಿಲುಕಿದ ಮಹಾರಾಷ್ಟ್ರದ ಬಾರ್ಜ್ ಹಾಗೂ ಬಾರ್ಜ್‌ನಲ್ಲಿದ್ದ 9 ಮಂದಿ ಸಿಬ್ಬಂದಿಗಳನ್ನು ಬೇಲಿಕೇರಿಯ ಕರಾವಳಿ ಕಾವಲು ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಮುಂಬೈಯಿಂದ ಮಂಗಳೂರಿಗೆ ತೆರಳುತಿದ್ದ ಈ ಬಾರ್ಜ್ ಸಂಜೆ 4 ಗಂಟೆ ಸುಮಾರಿಗೆ ಅಂಕೋಲಾ ಸಮೀಪದ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು. ಎಂ.ವಿ.ಸಾಯಿ ಕಲಶ್ ಹೆಸರಿನ ಈ ಬಾರ್ಜ್, ಹವಾಮಾನ ವೈಪರೀತ್ಯದಿಂದಾಗಿ ಸಮುದ್ರದಲ್ಲಿ ಉಂಟಾದ ಭಾರೀ ಅಲೆಗಳ ಕಾರಣ ಅಂಕೋಲಾ ತಾಲೂಕಿನ ಹಾರವಾಡ ಸಮೀಪ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿತ್ತು.
ಈ ಬಗ್ಗೆ ಮಾಹಿತಿ ಬಂದ ತಕ್ಷಣ ಬೇಲಿಕೇರಿ ಕರಾವಳಿ ಕಾವಲು ಪಡೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಕರಾವಳಿ ನಿಯಂತ್ರಣ ದಳದ ಸದಸ್ಯರು ಹಾಗೂ ಸಾಗರ ರಕ್ಷಕ ದಳದ ಸದಸ್ಯರು ಸೇರಿ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಸಂಜೆ 7 ಗಂಟೆ ಸುಮಾರಿಗೆ ಬಾರ್ಜ್‌ನ್ನು ಬೇಲಿಕೇರಿ ಬಂದರು ಸಮೀಪ ಸುರಕ್ಷಿತವಾಗಿ ತಂದು ಲಂಗರು ಹಾಕಿ ಬಾರ್ಜ್ ಹಾಗೂ ಅದರಲ್ಲಿದ್ದ ಎಲ್ಲಾ 9 ಮಂದಿಯ ಜೀವ ರಕ್ಷಣೆ ಮಾಡಿದರು. ಬಾಜ್‌ನಲ್ಲಿದ್ದ ಪ್ರೀತಂ ಕುಮಾರ್, ರಾಮ್‌ಜಿ ಶಾ, ರಾಮ್ ಸಿಂಗ್, ಮುನ್ನಾ ಕುಮಾರ್, ಸಚಿನ್ ಯಾದವ್, ಮಂಟು ಯಾದವ್, ಪರಸ್ವತ್ ಕ್ರಾಂತಾ, ಅಶೋಕ ಟಿಕ್ರಕ್ಸ್ ಇವರನ್ನು ಕರಾವಳಿ ಕಾವಲು ಪಡೆ ಪೊಲೀಸರು ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ್ ಎಸ್.ಆರ್., ಬೇಲೆಕೇರಿ ಸಿಎಸ್‌ಪಿ ಠಾಣೆಯ ಸಿಪಿಸಿ ಹಸನ್ ಕುಟ್ಟಿ, ಪುನೀತ್ ನಾಯ್ಕಿ, ಹಾರವಾಡ ಸಾಗರ ರಕ್ಷಕ ದಳದ ಗಣರಾಜ ಸಾದಿಯ, ಕರಾವಳಿ ನಿಯಂತ್ರಣ ದಳದ ಪರ್ವೇಶ್ ಸಾದಿಯೇ, ನಿತಿನ್ ಅಂಕೋಲೇಕರ್ ಮುಂತಾದವರು ಭಾಗವಹಿಸಿದ್ದರು ಎಂದು ಕರಾವಳಿ ಕಾವಲು ಪೊಲೀಸ್‌ನ ಮಲ್ಪೆಯ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.








