ಮದನಿ ಕಾಲೇಜಿನಲ್ಲಿ ‘ಬ್ಯಾರಿ ಸಾಹಿತ್ಯ ಸಂಘ’ಕ್ಕೆ ಚಾಲನೆ
ಮಂಗಳೂರು, ಅ.25: ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯ ವತಿಯಿಂದ ಉಳ್ಳಾಲ ಅಳೇಕಲದ ಮದನಿ ಜೂನಿಯರ್ ಕಾಲೇಜಿನಲ್ಲಿ ‘ಬ್ಯಾರಿ ಸಾಹಿತ್ಯ ಸಂಘ’ಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮದನಿ ಕಾಲೇಜಿನ ಪ್ರಾಂಶುಪಾಲ ಹಾಗೂ ಮೇಲ್ತೆನೆಯ ಕೋಶಾಧಿಕಾರಿ ಇಸ್ಮಾಯೀಲ್ ಟಿ. ನಾಡಿನ ವಿವಿಧ ಕಾಲೇಜುಗಳಲ್ಲಿ ತುಳು ಸಾಹಿತ್ಯ ಸಂಘ, ಕೊಂಕಣಿ ಸಾಹಿತ್ಯ ಸಂಘ ಇತ್ಯಾದಿ ಇದೆ. ಆದರೆ ಬ್ಯಾರಿ ಸಾಹಿತ್ಯ ಸಂಘಗಳು ಕಾಣಲು ಸಿಗುತ್ತಿಲ್ಲ. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬೆಳವಣಿಗಾಗಿರುವ ಸಂಘಟನೆಯಾಗಿರುವ ಮೇಲ್ತೆನೆಯು ಬ್ಯಾರಿ ಮಕ್ಕಳು ಅಧಿಕ ಸಂಖ್ಯೆಯಲ್ಲಿರುವ ಶಾಲಾ ಕಾಲೇಜುಗಳಲ್ಲಿ ಬ್ಯಾರಿ ಸಾಹಿತ್ಯಗಳನ್ನು ಸ್ಥಾಪಿಸಿ ಮಕ್ಕಳಲ್ಲಿ ಬ್ಯಾರಿ ಭಾಷೆಯ ಬಗ್ಗೆ ಗೌರವ ಮತ್ತು ಸಾಹಿತ್ಯದಲ್ಲಿ ಅಭಿರುಚಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮದನಿ ಕಾಲೇಜಿನಲ್ಲಿ ಬ್ಯಾರಿ ಸಾಹಿತ್ಯ ಸಂಘ ಸ್ಥಾಪಿಸುವ ಮೂಲಕ ಪ್ರಥಮ ಹೆಜ್ಜೆ ಇಟ್ಟಿವೆ. ಸಾಹಿತ್ಯ ಸಂಘದ ಮೂಲಕ ನಿರಂತರ ಕಾರ್ಯಕ್ರಮ ನಡೆಸಲು ಎಲ್ಲರೂ ಸಹಕರಿಸಬೇಕಿದೆ ಎಂದರು.
ಮೇಲ್ತೆನೆಯ ಅಧ್ಯಕ್ಷ ಹಂಝ ಮಲಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಮದನಿ ಎಜುಕೇಶನಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಯು.ಎನ್. ಇಬ್ರಾಹೀಂ, ಮದನಿ ಶಿಕ್ಷಣ ಸಂಸ್ಥೆಯ ಸಂಚಾಲಕ ಇಬ್ರಾಹೀಂ ಆಲಿಯಬ್ಬ, ಮದನಿ ಹಳೆ ವಿದ್ಯಾರ್ಥಿ ಸಂಘದ ಮಾಧ್ಯಮ ಕಾರ್ಯದರ್ಶಿ ರಿಯಾಝ್ ಮಂಗಳೂರು, ಬ್ಯಾರಿ ಝುಲ್ಫಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹಬೀಬ್ ರಹ್ಮಾನ್, ನಸೀರಾ ಬಾನು, ಮೆಟಿಲ್ಡಾ ಕ್ರಾಸ್ತ, ಸುರೇಖಾ, ಅಬ್ದುಲ್ ಅಝೀಝ್ ಪಾಲ್ಗೊಂಡಿದ್ದರು.
ಬ್ಯಾರಿ ಸಾಹಿತ್ಯ ಸಂಘದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಆಶಿಕ್, ಉಪಾಧ್ಯಕ್ಷರಾಗಿ ಶಮೀರ್, ಕಾರ್ಯದರ್ಶಿಯಾಗಿ ಮುಕ್ತಾರ್ ಅಹ್ಮದ್, ಫೈಝಲ್, ಸದಸ್ಯರಾಗಿ ತಂಝೀಲ್, ನಿಹಾಲ್, ಅಬೂಬಕರ್ ಸಿದ್ದೀಕ್, ಇಬ್ರಾಹೀಂ ಖಲೀಲ್, ಸಲ್ಮಾನ್, ಅಝ್‌ಬೀರ್, ಮುಹಮ್ಮದ್ ಶಾಕಿಬ್ ಅವರು ಆಯ್ಕೆಯಾಗಿರುವ ಪಟ್ಟಿಯನ್ನು ಮೇಲ್ತೆನೆಯ ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್ ಘೋಷಿಸಿದರು.
ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಆಶುಭಾಷಣ ಸ್ಪರ್ಧೆಯಲ್ಲಿ ಫೈಝಲ್ (ಪ್ರಥಮ), ಮುಹಮ್ಮದ್ ಆಶಿಕ್ (ದ್ವಿತೀಯ), ಖಲೀಲ್ (ತೃತೀಯ) ಬಹುಮಾನ ಪಡೆದರು. ಉಪನ್ಯಾಸಕ ಮುಹಮ್ಮದ್ ಫಾಝಿಲ್ ಮತ್ತು ಮೇಲ್ತೆನೆಯ ಸದಸ್ಯ ಅಶೀರುದ್ದೀನ್ ಮಂಜನಾಡಿ ತೀರ್ಪುಗಾರರಾಗಿ ಸಹಕರಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾರಿ ಸಾಹಿತ್ಯ ಸಂಘದ ವತಿಯಿಂದ ‘ಉಮ್ಮ’ ಕಿರುಪ್ರಹಸನ ಪ್ರದರ್ಶಿಸಲ್ಪಟ್ಟಿತು.
ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ವಂದಿಸಿದರು. ಸದಸ್ಯ ಇಸ್ಮತ್ ಪಜೀರ್ ಕಾರ್ಯಕ್ರಮ ನಿರೂಪಿಸಿದರು.