ಕ್ಯಾಂಪಸ್ ಫ್ರಂಟ್‌ನಿಂದ ‘ಅಕ್ಯುಮ್ಯುಲೇಟ್ 2019’ ಕ್ಯಾಂಪಸ್ ಲೀಡರ್ಸ್ ಮೀಟ್

ಪುತ್ತೂರು, ಅ.25: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ‘ಡಿಕೇಡ್ ಆಫ್ ಡಿಗ್ನಿಟಿ’ ಭಾಗವಾಗಿ ‘ಅಕ್ಯುಮ್ಯುಲೇಟ್ 2019’ ಕ್ಯಾಂಪಸ್ ಲೀಡರ್ಸ್ ಮೀಟ್ ಕಾರ್ಯಕ್ರಮವು ಇತ್ತೀಚೆಗೆ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು.
ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಧ್ವಜಾರೋಹಣ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಎಂ.ಎಸ್. ಸಾಜಿದ್ ಕ್ಯಾಂಪಸ್ ಫ್ರಂಟ್ ಹತ್ತು ವರ್ಷದ ಪಯಣದಲ್ಲಿ ಹಲವಾರು ಹೋರಾಟಗಳನ್ನು ಸಂಘಟಿಸುವ ಮೂಲಕ ವಿದ್ಯಾರ್ಥಿ ಚಳುವಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಫ್ಯಾಶಿಸಂ ವಿರುದ್ಧದ ರಾಜಿರಹಿತವಾದ ಹೋರಾಟದಿಂದ ಅದರ ಅಪಾಯ ಹಾಗೂ ಅದನ್ನು ಎದುರಿಸುವಂತಹ ಧೈರ್ಯವನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವಲ್ಲಿ ಕ್ಯಾಂಪಸ್ ಫ್ರಂಟ್ ಸಫಲವಾಗಿದೆ ಎಂದರು.
ಕ್ಯಾಂಪಸ್ ಫ್ರಂಟ್‌ನಲ್ಲಿ ಕಾರ್ಯಕರ್ತರಾಗಿ ಕೆಲಸ ನಿರ್ವಸಿ ಇಂದು ಉನ್ನತ ಹುದ್ದೆಗಳಲ್ಲಿ ದುಡಿಯುತ್ತಿರುವ ಸಂಪನ್ಮೂಲ ವ್ಯಕ್ತಿಗಳಿಂದ ಸ್ನೇಹ ಕೂಟ ನಡೆಯಿತು. ನಮ್ಮೆಲ್ಲ ಹೋರಾಟದಲ್ಲಿ ಭಾಗಿಯಾಗಿ ಹೇಗೆ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು ಎಂಬುದರ ಕುರಿತು ಅನುಭವಗಳನ್ನು ಹಂಚಿಕೊಂಡರು. ಕ್ಯಾಂಪಸ್ ಫ್ರಂಟ್‌ನ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಆರಿಫ್ ಶಿವಮೊಗ್ಗ ಈ ಕಾರ್ಯಕ್ರಮ ನಿರೂಪಿಸಿದರು.
ಕ್ಯಾಂಪಸ್ ಫ್ರಂಟ್ 10 ವರ್ಷದ ಅವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಸಮ್ಮಿಲನ ನಡೆಯಿತು. ಸಂಘಟನೆಯ ಆರಂಭದ ದಿನಗಳಲ್ಲಿ ಎದುರಿಸಿದ ಸವಾಲುಗಳು, ನಡೆದ ಐತಿಹಾಸಿಕ ಹೋರಾಟಗಳ ಬಗೆಗಿನ ಮೆಲುಕುಗಳು ಹಾಗೂ ಸಂಘಟನಾ ವಿಸ್ತರಣೆ ಕುರಿತು ಸಂವಾದ ನಡೆಯಿತು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಮುಹಮ್ಮದ್ ಶಾಕಿರ್, ಮುಹಮ್ಮದ್ ತುಫೈಲ್, ಇಕ್ಬಾಲ್ ಬೆಳ್ಳಾರೆ, ಮುಹಮ್ಮದ್ ತಫ್ಸೀರ್ ಹಾಗೂ ಹಾಲಿ ಅಧ್ಯಕ್ಷ ಫಯಾಝ್ ದೊಡ್ಡಮನೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವದಕತ್ ಶಾ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನಡೆದ ಕವಿಗೋಷ್ಠಿಯಲ್ಲಿ ಇಸ್ಮತ್ ಪಜೀರ್ ಅಧ್ಯಕ್ಷತೆ ವಹಿಸಿದ್ದರು. ಸಫ್ವಾನ್ ಸವಣೂರು, ಯಾಸೀನ್ ಬೆಳ್ತಂಗಡಿ, ಉಸ್ಮಾನ್ ಪೇರಮೊಗರು ಉಪಸ್ಥಿತರಿದ್ದರು. ಜುನೈದ್ ಘಟನೆಯಾಧಾರಿತ ಏಕಾಭಿನಯ ಪಾತ್ರ, ಅಡ್ವೊಕೇಟ್ ನೌಶಾದ್ ಖಾಸಿಂ ಹತ್ಯೆ ಆಧಾರಿತ ಪ್ರಹಸನ ಮತ್ತು ಹಾಡು, ಶಾಯರಿ ಜರುಗಿತು. ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.
ಗರ್ಲ್ಸ್ ಸಮ್ಮಿಟ್ ಭಾಗವಾಗಿ ನಡೆದ ಸ್ನೇಹ ಕೂಟದಲ್ಲಿ ಮಹಿಳಾ ಹೋರಾಟದ ಅಗತ್ಯತೆ ಹಾಗೂ ಮಹಿಳಾ ರಾಜಕೀಯ ಸಬಲೀಕರಣ ಕುರಿತು ಉಪನ್ಯಾಸ ನಡೆಯಿತು. ನ್ಯಾಷನಲ್ ವುಮೆನ್ಸ್ ಫ್ರಂಟ್ ನ ರಾಜ್ಯಾಧ್ಯಕ್ಷೆ ಝೀನತ್ ಬಂಟ್ವಾಳ್, ವುಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯಾಧ್ಯ್ಯಕ್ಷೆ ಶಾಹಿದಾ ತಸ್ನೀಮ್, ಮಿಸ್ರಿಯಾ, ಮುಫೀದಾ, ಸಮೀನಾ ಉಪಸ್ಥಿತರಿದ್ದರು. ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ಸಂಯೋಜಕ ಇಮ್ರಾನ್ ಪಿ.ಜೆ, ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್, ರಾಜ್ಯ ಕೋಶಾಧಿಕಾರಿ ಮುಬಾರಕ್ ಬೆಂಗಳೂರು, ರಾಜ್ಯ ಸಮಿತಿ ಸದಸ್ಯ ಆಸಿಫ್ ಹುಸೈನ್ ಬಾಷಾ, ಸರ್ಫರಾಝ್ ಗಂಗಾವತಿ ಮತ್ತಿತರು ಉಪಸ್ಥಿತರಿದ್ದರು.







