ಕೃಷ್ಣ ಜೆ. ಪಾಲೆಮಾರ್‌ಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ
ನ. 17ಕ್ಕೆ ಮಂಗಳೂರಿನಲ್ಲಿ ನಡೆಯುವ ‘ಕೃಷ್ಣಾಭಿವಂದನಂ’ ಕಾರ್ಯಕ್ರಮದಲ್ಲಿ ಪ್ರದಾನ

ಮಂಗಳೂರು, ಅ.25: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ಸಂದರ್ಭದಲ್ಲಿ ಕೊಡಮಾಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ಕ್ಕೆ ಹಿರಿಯ ಕಲಾಪೋಷಕ, ಉದ್ಯಮಿ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಯ್ಕೆಯಾಗಿದ್ದಾರೆ.
ನವೆಂಬರ್ 17ರಂದು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗುವ ‘ಕೃಷ್ಣಾಭಿವಂದನಂ’ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ದ.ಕ.ಜಿಲ್ಲೆಯ ಮಂಗಳೂರು ಸಮೀಪದ ಜಪ್ಪಿನಮೊಗರುವಿನಲ್ಲಿ ರಾಮಕ್ಷತ್ರಿಯ ಸಮಾಜದ ಕೃಷಿಕ ಕುಟುಂಬದಲ್ಲಿ ಹುಟ್ಟಿದರು. ವಿದ್ಯಾರ್ಜನೆ ಬಳಿಕ ಭೂವ್ಯವಹಾರ ಆರಿಸಿಕೊಂಡರು. ಸುಮಾರು 35 ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಲ್ಯಾಂಡ್‌ಲಿಂಕ್ಸ್ ಎಂಬ ಸಂಸ್ಥೆ ಇಂದಿಗೂ ಭೂ ವ್ಯವಹಾರ ಹಾಗೂ ವಸತಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ. ಮಂಗಳೂರು ನಗರದ ದೇರೆಬೈಲು ಎಂಬಲ್ಲಿ ಈ ಸಂಸ್ಥೆ ಎಲ್ಲಾ ವರ್ಗದ ವಸತಿ ಖರೀದಿದಾರರಿಗೂ ಕೈಗೆಟಕುವ ಬೆಲೆಯಲ್ಲಿ ನಿರ್ಮಿಸಿದ ‘ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್’ ಎಂಬ ವಸತಿ ಬಡಾವಣೆ ಅಗ್ರಪಂಕ್ತಿಯಲ್ಲಿದೆ. ಭಾರತ ಸರಕಾರದ ನಗರಾಭಿವೃದ್ಧಿ ಸಚಿವಾಲಯ ಈ ಯೋಜನೆಯನ್ನು ಗುರುತಿಸಿ ಪ್ರಶಂಸಿಸಿದೆ. ಸುಮಾರು 1,000ಕ್ಕೂ ಅಧಿಕ ಕುಟುಂಬಗಳು ಈ ನಗರಿಯಲ್ಲಿ ವಾಸಿಸುತ್ತಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ.
ಕೃಷ್ಣ ಜೆ. ಪಾಲೆಮಾರ್ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲೂ ಗುರುತಿಸಿಕೊಂಡವರು. 20 ವರ್ಷಗಳಿಗೂ ಹಿಂದೆ ಹುಟ್ಟು ಹಾಕಿದ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ದೇಶಾದ್ಯಂತ ನೆಲೆಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದವರಲ್ಲಿ ಕೃಷ್ಣ ಜೆ. ಪಾಲೆಮಾರ್ ಕೂಡಾ ಒಬ್ಬರು.
ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 25 ವರ್ಷಗಳಿಂದಲೂ ನಿರಂತರ ಅಧ್ಯಕ್ಷರಾಗಿ ಸಮಾಜಕ್ಕೆ ಆರ್ಥಿಕ ಚೈತನ್ಯ ಒದಗಿಸಿದ್ದಾರೆ. ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ನೆರವು ನೀಡಿರುವ ಕೃಷ್ಣ ಪಾಲೆಮಾರ್ ಜಪ್ಪಿನಮೊಗರು ಗ್ರಾಮದ ಕಡೆಕಾರು ಎಂಬಲ್ಲಿರುವ ಪುರಾಣ ಪ್ರಸಿದ್ಧ ಗುರುವನ ಶ್ರೀದುರ್ಗಾ ಕ್ಷೇತ್ರ, ಶ್ರೀಮಲ್ಲಿಕಾರ್ಜುನ ದೇವಳ ಸಮುಚ್ಛಯಗಳ ಅಭಿವೃದ್ಧಿಯ ಹರಿಕಾರರು. ಹೆಸರಾಂತ ಮಡ್ಯಾರು ಶ್ರೀ ಪರಾಶಕ್ತಿ ಕ್ಷೇತ್ರದ ಟ್ರಸ್ಟಿಯಾಗಿ ಕೂಡಾ ಅವರ ಸೇವೆ ಗಮನಾರ್ಹ. ಯಕ್ಷಗಾನ ಪ್ರೇಮಿಯಾಗಿದ್ದ ಪಾಲೆಮಾರ್ ಕೆಲವು ಯಕ್ಷಗಾನಗಳಲ್ಲಿ ಪಾತ್ರಧಾರಿಯಾಗಿಯೂ ಅಭಿನಯಿಸಿದ್ದಾರೆ.
2004ರಲ್ಲಿ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಎರಡು ಬಾರಿ ಆಯ್ಕೆಯಾದ ಪಾಲೆಮಾರ್ ಮುಖ್ಯಮಂತ್ರಿ ಯಡಿಯೂರಪ್ಪರ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಒಳನಾಡು ಜಲಸಾರಿಗೆ, ಬಂದರು, ಮೀನುಗಾರಿಕೆ, ಮುಜರಾಯಿ, ಪರಿಸರ ಇಲಾಖೆಗಳ ಖಾತೆಯನ್ನು ಅವರು ನಿಭಾಯಿಸಿದ್ದರು.







