ಮತ್ತೆ ತೀವ್ರಗೊಂಡ ಸೋಮೇಶ್ವರ ಕಡಲ್ಕೊರೆತ

ಉಳ್ಳಾಲ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೋಮೇಶ್ವರ ಕಡಲಿನಬ್ಬರ ಮತ್ತೆ ತೀವ್ರ ಗೊಂಡಿದೆ. ಸೋಮೇಶ್ವರ ದೇವಸ್ಥಾನ ಸಮೀಪ ಮೋಹನ್ ಅವರ ಮನೆಯ ಗೋಡೆಗೆ ಸಮುದ್ರದ ಅಲೆ ಶುಕ್ರವಾರ ಕೂಡಾ ತೀವ್ರ ವಾಗಿ ಅಪ್ಪಳಿಸುತ್ತಿದ್ದು ಮನೆ ಮಂದಿ ಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಅಬ್ಬಾಸ್ ಮತ್ತು ಅಝೀಝ್ ಅವರ ಮನೆ ಬಳಿ ತಡೆಗೋಡೆ ಇಲ್ಲದ ಕಾರಣ ಅಪಾಯದ ಪರಿಸ್ಥಿತಿಯಲ್ಲಿದೆ.
ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕೈಕೋ, ಮೊಗವೀರಪಟ್ಣದಲ್ಲಿ ಕೂಡಾ ಕಡಲ್ಕೊರೆತ ತೀವ್ರ ವಾಗಿದ್ದರೂ ಯಾವುದೇ ಅನಾಹುತ ನಡೆದ ಬಗ್ಗೆ ವರದಿಯಾಗಿಲ್ಲ. ಉಚ್ಚಿಲ, ಪೆರಿಬೈಲು ಭಾಗದಲ್ಲಿ ಕಡಲ್ಕೊರೆತ ಅದೇ ರೀತಿ ಮುಂದುವರಿದಿದ್ದು, ರಕ್ಷಣೆ ಯ ನಿಮಿತ್ತ 5 ಮನೆಗಳನ್ನು ಸ್ಥಳಾಂತರ ಮಾಡಲು ಶಾಸಕ ಯು.ಟಿ. ಖಾದರ್ ಸೂಚಿಸಿದರೂ ಸ್ಥಳಾಂತರ ಕಾರ್ಯ ನಡೆದಿಲ್ಲ. ಕಡಲ್ಕೊರೆತ ತೀವ್ರಗೊಂಡು ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಬಂದಿಲ್ಲ ಎನ್ನುವುದು ಸೋಮೇಶ್ವರ ಪುರಸಭೆಯ ಅಧ್ಯಕ್ಷ ರ ನುಡಿ.
ಪುರಸಭೆಯ ಮುಖ್ಯಾಧಿಕಾರಿ ವಾಣಿ ಆಳ್ವ, ಅಧ್ಯಕ್ಷ ರಾಜೇಶ್ ಮತ್ತು ಸದಸ್ಯರು ಕಡಲ್ಕೊರೆತ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆ ಮಳೆಯ ಪ್ರಮಾಣ ಕಡಿಮೆ ಇದ್ದರೂ ತೀವ್ರ ಗೊಂಡ ಗಾಳಿಗೆ ಕಡಲಿನಬ್ಬರ ತೀವ್ರ ಆಗಿತ್ತು. ಪ್ರಸಕ್ತ 6 ಮನೆಗಳು ಅಪಾಯ ದಂಚಿನಲ್ಲಿವೆ. ಮಳೆ ಇನ್ನು ಮುಂದುವರಿಯಬಹುದೇ ಎಂಬ ಭೀತಿ ಇಲ್ಲಿನ ನಿವಾಸಿ ಗಳಲ್ಲಿ ಕಾಡುತ್ತಿದೆ. ಒಟ್ಟಾರೆ ಗೊಂದಲದಲ್ಲಿ ಸೋಮೇಶ್ವರ ಇದ್ಲರೂ ಕೂಡಾ ಇದನ್ನು ಪರಿಹರಿಸುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಉಸ್ತುವಾರಿ ಸಚಿವರು ಭೇಟಿ ನೀಡಿ 30ಲಕ್ಷ ಮಂಜೂರು ಮಾಡಿರುವುದಾಗಿ ಘೋಷಿಸಿದ್ದಾರೆ. ಈ ಪರಿಹಾರ ಯಾವಾಗ ಸಿಗಬಹುದು, ಕಡಲ್ಕೊರೆತಕ್ಕೆ ತಡೆಗೋಡೆ ಯಾವಾಗ ನಿರ್ಮಾಣ ಆಗಬಹುದು ಎನ್ನುವುದು ಇಲ್ಲಿನ ನಾಗರಿಕರ ಪ್ರಶ್ನೆಯಾಗಿದೆ.







