ಮಂಗಳೂರು ವಿವಿಯಲ್ಲಿ ಶಹೀದ್ ಸ್ಥಳ್ (ಹುತಾತ್ಮರ ಚೌಕ)ಗೆ ಶಂಕುಸ್ಥಾಪನೆ

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಭಾಂಗಣಗಳಿಗೆ ನಾಮಕರಣ ಹಾಗೂ ಶಹೀದ್ ಸ್ಥಳ್‍ಗೆ (ಹುತಾತ್ಮರ ಚೌಕ) ಶಂಕುಸ್ಥಾಪನೆಯನ್ನು ರಾಜ್ಯದ ಉಪಮುಖ್ಯಮಂತ್ರಿ ಪ್ರೊ.ಅಶ್ವಥ್ ನಾರಾಯಣ ಅವರು ನೆರವೇರಿಸಿದರು.
ಬಳಿಕ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಸೇವೆಗಾಗಿ ತಮ್ಮ ಕುಟುಂಬದವರನ್ನೂ ದೂರವಿಟ್ಟುಕೊಂಡು ಯಾವುದಕ್ಕೂ ಅಂಜದೆ ದೇಶ ಕಾಯುವ, ಶಾಂತಿ ನೆಮ್ಮದಿಯನ್ನು ಕಾಪಾಡುವ ವೀರ ಸೈನಿಕರ ತ್ಯಾಗ, ಸೇವೆಯನ್ನು ನೆನಪಿಸುವಂತಹ ಕಾರ್ಯ ಸದಾ ಆಗಬೇಕಿದೆ. ಅಲ್ಲದೆ ವಿವಿಯಲ್ಲಿ ನಿರ್ಮಾಣವಾಗುವ ಹುತಾತ್ಮರ ಚೌಕವು ನಮ್ಮಲ್ಲರಿಗೈ ದೇಶ ಸೇವೆಯ ಪ್ರೇರೇಪಣೆಯೊಂದಿಗೆ ನಮ್ಮ ರಾಷ್ಟ್ರಭಕ್ತಿಯನ್ನು ಮೂಡಿವಂತಾಗಲಿ. ಹುತಾತ್ಮ ಸೈನಿಕರನ್ನು ಗೌರವಿಸುವ ಇಂತಹ ಮಾದರಿ ಕಾರ್ಯವು ದೇಶದ ಪ್ರತೀ ವಿಶ್ವವಿದ್ಯಾಲಯದಲ್ಲೂ ಆರಂಭವಾಗಬೇಕಿದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯವು ಈಗಾಗಲೇ ಉತ್ತಮ ಕಾರ್ಯಗಳ ಮೂಲಕ ಸಾಧನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ, ತಂತ್ರಜ್ಞಾನದ ಮೂಲಕ ಜಗತ್ತಿನಲ್ಲೇ ಶ್ರೇಷ್ಠ ವಿಶ್ವವಿದ್ಯಾಲಯವಾಗಿ ಮೂಡಿ ಬರಲಿ. ನಾನು ಕೂಡಾ ಇಲ್ಲಿಯ ಹಳೆ ವಿದ್ಯಾರ್ಥಿಯಾಗಿದ್ದು ನಮಗೆಲ್ಲರಿಗೂ ಹೆಮ್ಮೆಯಾಗುವಂತೆ ವಿವಿಯು ಬೆಳೆಯಲಿ ಎಂದು ಹೇಳಿದರು.
ನಾವು ನಮ್ಮ ನಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮಾಜಕ್ಕೆ ನಾವು ನಿಷ್ಠರಾಗಿರಬೇಕು. ಆಗ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಉತ್ತಮತೆಯ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನಾವು ನೀಡುವಂತಾಗಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು.ಟಿ.ಖಾದರ್, ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್, ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ, ಪರಿಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ, ಕಾರ್ಯಕಾರಿ ಅಭಿಯಂತರರಾದ ಉಮೇಶ್ ಭಟ್ ಅವರು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.
ಸಭಾಂಗಣಗಳಿಗೆ ನಾಮಕರಣ
ಹೊಸ ಸೆನೆಟ್ ಹಾಲ್ ರಾಣಿ ಅಬ್ಬಕ್ಕ ಸಭಾಂಗಣ, ಹಳೆಯ ಸೆನೆಟ್ ಸಭಾಂಗಣಕ್ಕೆ ಡಾ.ಯು.ಆರ್.ರಾವ್ ಸಭಾಂಗಣ ಹಾಗೂ ಎಂಬಿಎ ಸಭಾಂಗಣವು ಶ್ರೀನಿವಾಸ ಮಲ್ಯ ಸಭಾಂಗಣ ಎಂದು ನಾಮಕರಣಗೊಳಿಸಲಾಯಿತು.








