ಅರಬಿ ಸಮುದ್ರದಲ್ಲಿ ಆರ್ಭಟಿಸಿದ ‘ಕ್ಯಾರ್’
►ಕರಾವಳಿಯಲ್ಲಿ ಭಾರೀ ಮಳೆ ► ಐದು ದಿನಗಳಲ್ಲಿ ಒಮಾನ್ ತಲುಪಲಿರುವ ‘ಕ್ಯಾರ್’

ಬೆಂಗಳೂರು,ಅ.25: ಅರಬಿ ಸಮುದ್ರದಲ್ಲಿನ ತೀವ್ರ ವಾಯುಭಾರ ಕುಸಿತವು ‘ಕ್ಯಾರ್ ’ಚಂಡಮಾರುತವಾಗಿ ರೂಪುಗೊಂಡಿರುವುದನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ದೃಢಪಡಿಸಿದ್ದು,ಶುಕ್ರವಾರ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿತ್ತು. ಚಂಡಮಾರುತವು ಮುಂದಿನ ಐದು ದಿನಗಳಲ್ಲಿ ಒಮಾನ್ ಕರಾವಳಿಯತ್ತ ಚಲಿಸಲಿದೆ ಎಂದು ಐಎಂಡಿ ತಿಳಿಸಿದೆ.
ಪೂರ್ವ/ಮಧ್ಯ ಅರಬಿ ಸಮುದ್ರದಲ್ಲಿಯ ತೀವ್ರ ವಾಯುಭಾರ ಕುಸಿತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ ಐದು ಕಿ.ಮೀ.ವೇಗದಲ್ಲಿ ಉತ್ತರದತ್ತ ಚಲಿಸಿದೆ ಮತ್ತು ಶುಕ್ರವಾರ ಬೆಳಗ್ಗೆ 5:30ಕ್ಕೆ ‘ಕ್ಯಾರ್’ ಚಂಡಮಾರುತವಾಗಿ ಮಹಾರಾಷ್ಟ್ರದ ರತ್ನಗಿರಿಯಿಂದ ಪಶ್ಚಿಮ-ನೈರುತ್ಯಕ್ಕೆ ಸುಮಾರು 240 ಕಿ.ಮೀ. ಮತ್ತು ಮುಂಬೈನಿಂದ ದಕ್ಷಿಣ-ನೈರುತ್ಯಕ್ಕೆ 380 ಕಿ.ಮೀ. ಹಾಗೂ ಒಮಾನ್‌ನ ಸಲಾಲಾದಿಂದ ಪೂರ್ವ-ನೈರುತ್ಯಕ್ಕೆ 1,850 ಕಿ.ಮೀ.ದೂರದಲ್ಲಿ ಸ್ಥಿತಗೊಂಡಿತ್ತು ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.
ಚಂಡಮಾರುತವು ಮುಂದಿನ ಐದು ದಿನಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಒಮಾನ್ ಕರಾವಳಿಯತ್ತ ಚಲಿಸುವ ಹೆಚ್ಚಿನ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಅದು ತೀವ್ರ ಚಂಡಮಾರುತವಾಗಿ ಮತ್ತು ನಂತರದ 12 ಗಂಟೆಗಳಲ್ಲಿ ಅತ್ಯಂತ ತೀವ್ರ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಅದು ಹೇಳಿದೆ.
ಚಂಡಮಾರುತವು ಮಹಾರಾಷ್ಟ್ರ ಕರಾವಳಿಯಿಂದ 300-400 ಕಿ.ಮೀ.ಪಶ್ಚಿಮದಲ್ಲಿ ಮಧ್ಯ ಅರಬಿ ಸಮುದ್ರದಲ್ಲಿ ಸ್ಥಿತಗೊಂಡಿರುವುದರಿಂದ ಕರ್ನಾಟಕದ ಮೇಲೆ ತೀವ್ರ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ ಎಂದಿದೆ.
ಚಂಡಮಾರುತವು ಕರ್ನಾಟಕದಿಂದ ಇನ್ನಷ್ಟು ಉತ್ತರಕ್ಕೆ ಚಲಿಸಿದೆ. ಸಮುದ್ರವು ಪ್ರಕ್ಷುಬ್ಧಗೊಳ್ಳಲಿದ್ದು,ಕರಾವಳಿಯುದ್ದಕ್ಕೂ ಭಾರೀ ವೇಗದ ಗಾಳಿಯೊಂದಿಗೆ ಮಧ್ಯಮದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ಹವಾಮಾನ ತಜ್ಞ ಸುನಿಲ ಗಾವಸ್ಕರ್ ತಿಳಿಸಿದರು.
ಮಹಾರಾಷ್ಟ್ರ ಗಡಿಗೆ ಸಮೀಪವಿರುವ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಧ್ಯಮ ಮಳೆ ಮತ್ತು ಅಲ್ಲಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು-ಸಿಡಿಲು ಸಹಿತ ಮಳೆಯ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.
ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಆದರೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ನೀಡಲಾಗಿದ್ದ ರೆಡ್ ಅಲರ್ಟ್‌ನ್ನು ಶುಕ್ರವಾರಕ್ಕೆ ಆರೇಂಜ್ ಅಲರ್ಟ್‌ಗೆ ಮತ್ತು ಶನಿವಾರಕ್ಕಾಗಿ ಯೆಲ್ಲೊ ಅಲರ್ಟ್‌ಗೆ ತಗ್ಗಿಸಲಾಗಿದೆ.
ಗುರುವಾರ ಮತ್ತು ಶನಿವಾರದ ನಡುವೆ ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರದಲ್ಲಿ 3ರಿಂದ 3.2 ಮೀ.ಎತ್ತರದ ಅಲೆಗಳು ಏಳಲಿವೆ ಎಂದು ಭಾರತೀಯ ಮಹಾಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರವು ಗುರುವಾರ ಮುನ್ಸೂಚನೆಯನ್ನು ನೀಡಿತ್ತು.







