ಜಮ್ಮು-ಕಾಶ್ಮೀರದ ಪ್ರಥಮ ಲೆ.ಗ.ಆಗಿ ಗಿರೀಶಚಂದ್ರ ಮುರ್ಮು ನೇಮಕ

ಹೊಸದಿಲ್ಲಿ, ಅ.25: ಐಎಎಸ್ ಅಧಿಕಾರಿ ಗಿರೀಶಚಂದ್ರ ಮುರ್ಮು ಅವರನ್ನು ಜಮ್ಮು-ಕಾಶ್ಮೀರದ ಪ್ರಥಮ ಲೆಫ್ಟಿನಂಟ್ ಗವರ್ನರ್ ಆಗಿ ನೇಮಗೊಳಿಸಲಾಗಿದೆ ಎಂದು ರಾಷ್ಟ್ರಪತಿಗಳ ಕಚೇರಿಯು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರಾಧಾಕೃಷ್ಣ ಮಾಥುರ ಅವರನ್ನು ಲಡಾಖ್‌ನ ಲೆಫ್ಟಿನಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಆ.5ರಂದು ಜಮ್ಮು-ಕಾಶ್ಮೀರವನ್ನು ವಿಭಜಿಸಿ ಇವೆರಡು ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಲಾಗಿದ್ದು, ಅ.31ರಂದು ಅಸ್ತಿತ್ವಕ್ಕೆ ಬರಲಿವೆ.
ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರನ್ನು ಗೋವಾದ ರಾಜ್ಯಪಾಲರಾಗಿ ನೇಮಕಗೊಳಿಸಲಾಗಿದ್ದು, ಅವರು ಮೃದುಲಾ ಸಿನ್ಹಾ ಅವರಿಂದ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
1985ರ ತಂಡದ ಗುಜರಾತ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಮುರ್ಮು ಒಡಿಶಾ ಮೂಲದವರಾಗಿದ್ದು, ಕೇಂದ್ರ ವಿತ್ತ ಸಚಿವಾಲಯದಲ್ಲಿ ವೆಚ್ಚ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಮಿಂಗ್‌ಹ್ಯಾಮ್ ವಿವಿಯಿಂದ ಉದ್ಯಮಾಡಳಿತದಲ್ಲಿ ಪದವಿಯನ್ನು ಪಡೆದಿರುವ ಮುರ್ಮು ಕೇಂದ್ರ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅತ್ಯಂತ ನಂಬಿಕಸ್ತ ಅಧಿಕಾರಿಗಳಲ್ಲಿ ಓರ್ವರು ಎಂದು ಪರಿಗಣಿಸಲ್ಪಟ್ಟಿದ್ದಾರೆ.
1977ರ ತಂಡದ ತ್ರಿಪುರಾ ಕೇಡರ್‌ನ ಐಎಎಸ್‌ಅಧಿಕಾರಿಯಾಗಿರುವ ಮಾಥುರ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ)ರೂ ಆಗಿದ್ದಾರೆ.
ಮುರ್ಮು ಅವರು ನವೆಂಬರ್‌ನಲ್ಲಿ ಹಾಲಿ ಹುದ್ದೆಯಿಂದ ನಿವೃತ್ತರಾಗಲಿದ್ದು, ಮಾಥುರ 2018, ನವೆಂಬರ್‌ನಲ್ಲಿ ಸಿಐಸಿ ಹುದ್ದೆಯಿಂದ ನಿವೃತ್ತರಾಗಿದ್ದರು. ನೂತನ ಲೆಫ್ಟಿನಂಟ್ ಗವರ್ನರ್‌ಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅ.31ರಂದು ನಡೆಯುವ ಸಾಧ್ಯತೆಯಿದೆ.
ಜಮ್ಮು-ಕಾಶ್ಮೀರ ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಕೇಂದ್ರವು ಲೆಫ್ಟಿನಂಟ್ ಗವರ್ನರ್ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಯ ನೇರ ನಿಯಂತ್ರಣವನ್ನು ಹೊಂದಿರಲಿದ್ದು, ಭೂಮಿಯ ಹಕ್ಕುಗಳು ಚುನಾಯಿತ ಸರ್ಕಾರದ ಆಡಳಿತ ವ್ಯಾಪ್ತಿಯಲ್ಲಿರಲಿವೆ. ದಿಲ್ಲಿಯಲ್ಲಿ ಲೆಫ್ಟಿನಂಟ್ ಗವರ್ನರ್ ಭೂಮಿಯ ಮೇಲೂ ಹಕ್ಕುಗಳನ್ನು ಹೊಂದಿದ್ದಾರೆ.
ಇದೇ ವೇಳೆ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಮಿಜೋರಂ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಇದುವರೆಗೂ ಅಸ್ಸಾಂ ರಾಜ್ಯಪಾಲ ಜಗದೀಶ ಮುಖಿ ಅವರು ಮಿಜೋರಂ ಹೊಣೆಯನ್ನೂ ಹೊತ್ತಿದ್ದರು.
ಗುಪ್ತಚರ ಸಂಸ್ಥೆ (ಐಬಿ)ಯ ಮಾಜಿ ಮುಖ್ಯಸ್ಥ ಹಾಗೂ ಜಮ್ಮು-ಕಾಶ್ಮೀರಕ್ಕೆ ಸರಕಾರದಿಂದ ಸಂಧಾನಕಾರರಾಗಿ ನೇಮಕಗೊಂಡಿದ್ದ ದಿನೇಶ್ವರ ಶರ್ಮಾ ಅವರನ್ನು ಲಕ್ಷದ್ವೀಪದ ಆಡಳಿತಗಾರರಾಗಿ ವರ್ಗಾಯಿಸಲಾಗಿದೆ.







