ಜನಪರ ಚಳವಳಿಗಳ ಮೇಲೆ ಗಾಂಧಿ ಚಿಂತನೆ ಪ್ರಭಾವ ಬೀರಿದೆ: ನಟರಾಜ್ ಹುಳಿಯಾರ್
ಬೆಂಗಳೂರು, ಅ.25: ಕರ್ನಾಟಕದ ಆರೋಗ್ಯಪೂರ್ಣ ಜನಪರ ಚಳವಳಿಗಳ ಮೇಲೆ ಮಹಾತ್ಮಗಾಂಧೀಯ ಚಿಂತನೆ ಪ್ರಭಾವ ಬೀರಿದೆ ಎಂದು ಲೇಖಕ ಹಾಗೂ ಬೆಂಗಳೂರು ವಿವಿಯ ಗಾಂಧೀ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಸಾಹಿತ್ಯ ಅಕಾಡೆಮಿ, ಶಬ್ದನಾ ಭಾಷಾಂತರ ಕೇಂದ್ರದ ವತಿಯಿಂದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಅಕಾಡೆಮಿಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕನ್ನಡದಲ್ಲಿ ಗಾಂಧೀ ಸ್ವೀಕಾರ’ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ ಚಳವಳಿಯಲ್ಲಿ ಗಾಂಧೀಜಿ ತೊಡಗಿಸಿಕೊಂಡ ಬಳಿಕ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲ ಲೇಖಕರು ಅವರಿಗೆ ಸ್ಪಂದಿಸಿದ್ದಾರೆ. ಅದೇ ರೀತಿ ಅಂದಿನ ದೇವನೂರ ಮಹಾದೇವರು ಆರಂಭಿಸಿದ ದಲಿತ ಚಳವಳಿ, ಪರಿಸರ ಚಳವಳಿ, ಕಾರ್ಮಿಕ ಚಳವಳಿ ಸೇರಿದಂತೆ ಅನೇಕ ಚಳವಳಿಗಳು ಗಾಂಧಿಯವರ ಚಿಂತನೆಗಳನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು. ಮಹಾತ್ಮಗಾಂಧೀ ಕುವೆಂಪು, ಲೋಹಿಯಾ, ಲಂಕೇಶ್, ಶಿವರಾಮ ಕಾರಂತರು, ದೇವನೂರ ಮಹಾದೇವ, ಪೂರ್ಣಚಂದ್ರ ತೇಜಸ್ವಿ, ರಾಜರತ್ನಂ, ಸಿದ್ದಲಿಂಗಯ್ಯ, ಕಂಬಾರ ಸೇರಿದಂತೆ ಇಂದಿನ ಸಾಹಿತಿಗಳು, ಲೇಖಕರವರೆಗೂ ಅನೇಕರನ್ನು ಪ್ರಭಾವಿಸಿದ್ದಾರೆ. ಕಾರಂತರ ಚೋಮನದುಡಿ, ದೇವನೂರರ ಎದೆಗೆ ಬಿದ್ದ ಅಕ್ಷರ, ತೇಜಸ್ವಿಯ ಕರ್ವಾಲೋ ಸೇರಿದಂತೆ ಅನೇಕರ ಕೃತಿಗಳಲ್ಲಿ ಗಾಂಧಿಯ ಚಿಂತನೆಗಳನ್ನು ಕಾಣಬಹುದಾಗಿದೆ ಎಂದರು.
ದೇಶದಲ್ಲಿ ಗಾಂಧೀವಾದವನ್ನು ಅಷ್ಟು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ ಎಂದ ಅವರು, ಸನಾತನವಾದಿಗಳು ಅತಿಹೆಚ್ಚು ಗಾಂಧಿಗೆ ಹೆದರಿಕೊಂಡಿದ್ದರು. ಅಲ್ಲದೆ, ಬ್ರಾಹ್ಮಣರು ಸನಾತನದಿಂದ ಹೊರ ಬರಲು ಸಹ ಗಾಂಧಿಯ ಚಿಂತನೆಗಳೇ ನೆರವಾಗಿವೆ. ಗಾಂಧಿಯು ಅಹಿಂಸೆ ದುರ್ಬಲರ ಅಸ್ತ್ರವಲ್ಲ, ಶೌರ್ಯರ ಅಸ್ತ್ರವಾಗಿದೆ ಎಂದು ಹೇಳುತ್ತಿದ್ದರೆಂದು ಅವರು ಪ್ರತಿಪಾದಿಸಿದರು.
ಮಹಾತ್ಮಗಾಂಧಿಯವರ ಆತ್ಮಕತೆಯು ಹಲವಾರು ಭಾಷೆಗಳಿಗೆ ಭಾಷಾಂತರವಾಗಿದೆ. ಗಾಂಧಿಯು ಆತ್ಮಕತೆಯನ್ನು ಸತ್ಯಾನ್ವೇಷಣೆ, ಸತ್ಯದೊಂದಿಗಿನ ಪ್ರಯೋಗ ಎಂದಿದ್ದಾರೆ. ಹೀಗಾಗಿ, ಆಂಗ್ಲದಿಂದ ಭಾಷಾಂತರವಾದ ಅವರ ಆತ್ಮಕಥೆ ಮೂಲಭಾಷೆಗಿಂತ ಸ್ವಲ್ಪ ಏರುಪೇರಾಗಿದೆ ಎಂದು ಮಾಹಿತಿ ನೀಡಿದರು. ಇಂಗ್ಲಿಷ್‌ನಲ್ಲಿ ಮಾತನಾಡುವ ವೇಳೆ ಸಿಗುವ ಶಬ್ದಕೋಶವನ್ನೇ ಅನುವಾದದಲ್ಲಿ ಬಳಸುತ್ತೇವೆ. ಅಲ್ಲಿ ಸಿಗುವಂತಹ ಪದಗಳೇ ನಮ್ಮ ಭಾಷೆಯನ್ನು ನಿಯಂತ್ರಣ ಮಾಡುತ್ತದೆ. ಇಂದಿಗೂ ಗುಜರಾತಿ ಭಾಷೆಯಿಂದ ಬಿಟ್ಟಿರುವ, ಎಡಿಟ್ ಮಾಡಿರುವ ಪದಗಳಿಗೆ ಬಹಳ ಬೇಡಿಕೆಯಿದೆ ಎಂದ ಅವರು, ನಮ್ಮ ಸಂವೇದನೆ ಯಾವುದಾಗಿರುತ್ತದೆಯೋ ಅದು ಹೆಚ್ಚು ಪರಿಣಾಮಕಾರಿಯಾಗಿ ಭಾಷಾಂತರವಾಗುತ್ತದೆ ಎಂದು ನುಡಿದರು.
ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ನಡುವೆ ಹಲವು ವೈರುಧ್ಯಗಳನ್ನು ಗುರುತಿಸುತ್ತಾ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದೇವೆ. ಅದರ ಬದಲಿಗೆ, ಅವರ ಸಾಹಿತ್ಯವನ್ನು ಓದಿ, ವಿಮರ್ಶೆಗೆ ಒಳಪಡಿಸುವ ಅಗತ್ಯವಿದೆ. ಲಂಕೇಶ್ ಹಾಗೂ ಲೋಹಿಯಾ ಸಹ ಗಾಂಧಿಯನ್ನು ಟೀಕಿಸಿದ್ದರು ಮತ್ತು ಒಪ್ಪಿದ್ದರು ಎಂದು ನಟರಾಜ್ ಹುಳಿಯಾರ್ ತಿಳಿಸಿದರು.
ಗಾಂಧಿಯು ಮುಸ್ಲಿಮ್ ಮಹಿಳೆಯರ ಕುರಿತು ಹಾಗೂ ಮತ್ತಿತರೆ ವಿಷಯಗಳ ಕುರಿತಾದ ಪತ್ರಗಳು ಕನ್ನಡದಲ್ಲಿ ಸಾಕಷ್ಟಿವೆ ಎಂದ ಅವರು, ಗಾಂಧಿಯನ್ನು ಪಠ್ಯ, ಗದ್ಯ, ಪದ್ಯ, ಲಾವಣಿಗಳಲ್ಲಿಯೂ ಕಾಣಬಹುದಾಗಿದೆ ಎಂದು ಹೇಳಿದರು.
ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯೂ ಸಂಪೂರ್ಣ ಬದಲಾಗಿದೆ. ನಮ್ಮಲ್ಲಿನ ವಿಶ್ವವಿದ್ಯಾಲಯಗಳು ಬೇರೆ ಬೇರೆ ವಿಚಾರಗಳನ್ನು ಚರ್ಚೆ ಮಾಡುತ್ತಾ, ಗಾಂಧಿಯ ಚಿಂತನೆಗಳನ್ನು ದೂರಕ್ಕೆ ಸರಿಸಿವೆ. ಗಾಂಧೀ, ಅಂಬೇಡ್ಕರ್, ಲೋಹಿಯಾರ ಚಿಂತನೆಗಳ ಓದು, ಚರ್ಚೆ, ವಿಮರ್ಶೆ ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ವಿದ್ವಾಂಸ ಜಿ.ಬಿ.ಶಿವರಾಜು, ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್.ವಿಜಯಶಂಕರ, ದಲಿತ ಕವಿ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.
ಶಿಕ್ಷಣದಲ್ಲಿ ಗಾಂಧಿಯ ವಿಚಾರಧಾರೆಗಳು ಸಿಗದೇ ಇರುವುದರಿಂದ ಗೋಡ್ಸೆಯನ್ನು ವೈಭವೀಕರಿಸಿ ಬರೆಯುತ್ತಿದ್ದಾರೆ. ಹೀಗಾಗಿ, ಗಾಂಧಿಯ ವಿಚಾರಧಾರೆಗಳ ಮರು ಓದು, ವಿಮರ್ಶೆ ಅತ್ಯಗತ್ಯವಾಗಿದೆ. ಆ ಮೂಲಕ ಗಾಂಧಿಯ ಚಿಂತನೆಗಳನ್ನು ಬಿತ್ತುವ ಮೂಲಕ, ಗೋಡ್ಸೆಯ ವಿಚಾರಧಾರೆಗಳನ್ನು ನಾಶಮಾಡಬೇಕಿದೆ.
-ಪ್ರೊ.ನಟರಾಜ್ ಹುಳಿಯಾರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ







