ದೀಪಾವಳಿ: ನಿಯಮಗಳನ್ನು ಪಾಲಿಸಲು ಕರೆ

ಬೆಂಗಳೂರು, ಅ.25: ಸಾರ್ವಜನಿಕರು ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಒಳಾಡಳಿತ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಕರೆ ನೀಡಿದ್ದಾರೆ.
ವಾಯು ಮಾಲಿನ್ಯ, ಶಬ್ದಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ, ಸರಣಿ ಸ್ಪೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಿದೆ. ಸ್ಫೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ಮತ್ತು ಅಧಿಕೃತವಾಗಿ ಪರವಾನಗಿ ಪಡೆದವರು ಸ್ಪೋಟಕ ಪಟಾಕಿಗಳನ್ನು ಈ ಆದೇಶಾನುಸಾರ ಮಾತ್ರ ಮಾರಾಟ ಮಾಡುವುದು ಕಡ್ಡಾಯವಾಗಿದೆ
ದೀಪಾವಳಿ ಹಬ್ಬದ ಸಂಬಂಧ ಅ.27ರ ನರಕ ಚತುರ್ದರ್ಶಿ ಅ.28ರ ಅಮಾವಾಸ್ಯೆ ದಿನದ ಲಕ್ಷ್ಮಿಪೂಜೆ, ಅ.29ರ ಬಲಿಪಾಢ್ಯಮಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ರಾತ್ರಿ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಈ ಸಂಬಂಧ ಪೊಲೀಸ್ ಇಲಾಖೆ ಪಟಾಕಿ ಸಿಡಿತ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ನಡೆಯುವಂತೆ ಮುಂಜಾಗ್ರತೆ ವಹಿಸಬೇಕು.
ನಿಷೇಧಿತ ಸ್ಪೋಟಕ ಪಟಾಕಿಗಳ ಮಾರಾಟವನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು. ತಪ್ಪಿದಲ್ಲಿ ಸಂಬಂಧಿಸಿದ ಠಾಣಾಧಿಕಾರಿಗಳನ್ನು, ನ್ಯಾಯಾಲಯದ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ನಿರ್ಧರಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಡಾ.ರಜನೀಶ್ ಗೋಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮಗಳು
-ಮಕ್ಕಳಿಗೆ ದೊಡ್ಡವರ ಸಮ್ಮುಖದಲ್ಲೆ ಪಟಾಕಿ ಹಚ್ಚಲು ತಿಳಿಸತಕ್ಕದ್ದು.
-ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುರಕ್ಷಿತ. ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಹಚ್ಚಬಾರದು.
-ಆದಷ್ಟು ಮಟ್ಟಿಗೆ ಶರೀರಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸತಕ್ಕದ್ದು. ದೊಗಲೆ ಬಟ್ಟೆಗಳನ್ನು ಧರಿಸಬಾರದು.
-ಸುರುಸುರು ಬತ್ತಿ ಇತ್ಯಾದಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು.
-ಪಟಾಕಿ ಹಚ್ಚುವಾಗ ಅದರ ಮೇಲೆ ಬಾಗಬಾರದು. ಸಾದ್ಯವಾದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು.
-ಯಾವುದೇ ಪಾತ್ರೆ ಒಳಗೆ ಅಥವಾ ಇಕ್ಕಟ್ಟಾದ ಸ್ಥಳಗಳಲ್ಲಿ ಪಟಾಕಿ ಹಚ್ಚಬಾರದು.
-ಪಟಾಕಿಗಳನ್ನು ಜೇಬಿನಲ್ಲಿಡಬಾರದು.
-ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿಯ ಅಥವಾ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು ಹಾಗೂ ಪೊಟ್ಟಣಗಳನ್ನು ತೆರೆಯಬಾರದು.
-ಹಚ್ಚಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪುನರ್ ಪರೀಕ್ಷಿಸಲು ಪ್ರಯತ್ನಿಸಬಾರದು.







