‘ರಾಜ್ಯಕ್ಕೆ ಮೂರು ಹೊಸ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು’

ಬೆಂಗಳೂರು, ಅ.25: ಕೇಂದ್ರ ಸರಕಾರದ ಪ್ರಾಯೋಜಿತ ಯೋಜನೆಯಡಿ ಕರ್ನಾಟಕಕ್ಕೆ ಮೂರು ಹೊಸ ಸರಕಾರಿ ವೈದ್ಯಕೀಯ ಕಾಲೇಜುಗಳು ಮಂಜೂರಾಗಿದ್ದು, ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಂಸದೆ ಶೋಭಾ ಕರಂದ್ಲಾಜೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಚಿಕ್ಕಮಗಳೂರು, ಹಾವೇರಿ ಹಾಗೂ ಯಾದಗಿರಿಯಲ್ಲಿ ತಲಾ 325 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೈದ್ಯಕೀಯ ಕಾಲೇಜುಗಳಿಗೆ ಶೇ.60ರಷ್ಟು ಅನುದಾನವನ್ನು ಕೇಂದ್ರ ಸರಕಾರ ಒದಗಿಸಲು ಸಮ್ಮಿತಿಸಿದೆ ಎಂದು ಅವರು ಹೇಳಿದ್ದಾರೆ.
ಚಿಕ್ಕಮಗಳೂರು ಜೊತೆಗೆ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಿಗೆ ಕೇಂದ್ರ ಸರಕಾರದಿಂದ ಇಂತಹ ಗಮನಾರ್ಹ ನೆರವು ದೊರೆತಿರುವುದು ಸ್ವಾಗತಾರ್ಹ. ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ ಕೇಂದ್ರ ಸರಕಾರ ಹೊಂದಿರುವ ಕಾಳಜಿಯ ದ್ಯೋತಕವಿದು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೇಂದ್ರ ಸರಕಾರ ಮೂರು ಕಾಲೇಜುಗಳ ಸ್ಥಾಪನೆಗಾಗಿ ಒಟ್ಟು 975 ಕೋಟಿ ರೂ.ಗಳಿಗೆ ಮಂಜೂರಾತಿ ನೀಡಿದ್ದು ಇದರಲ್ಲಿ 390 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಒದಗಿಸಬೇಕಿದೆ. ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕೇಂದ್ರ ಸರಕಾರದ ಈ ಕ್ರಮವು ಮಹತ್ವದ ಪಾತ್ರ ವಹಿಸಲಿದೆ. ಪ್ರಧಾನಿ ನರೇಂದ್ರ ಮೋದಿಗೂ ಧನ್ಯವಾದಗಳು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







