ಬಾಬಾಬುಡನ್ ದರ್ಗಾ ವಿಚಾರದಲ್ಲಿ ಸುಳ್ಳು ಆರೋಪ ಹರಡಲಾಗುತ್ತಿದೆ: ಕೋಸೌವೇ ರಾಜ್ಯ ಕಾರ್ಯದರ್ಶಿ ಗೌಸ್

ಚಿಕ್ಕಮಗಳೂರು, ಅ.26: ಗುರುದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದ ವಿಚಾರದಲ್ಲಿ ಕೆಲವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಶನಿವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್, ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ದರ್ಗಾ ಜಿಲ್ಲೆಯ ಒಂದು ಸೌಹಾರ್ದ ತಾಣವಾಗಿದೆ. ವಿವಾದದ ವಿಚಾರಣೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೂ ಇಲ್ಲಿ ಪ್ರತಿನಿತ್ಯ, ಹಿಂದೂ, ಮುಸ್ಲಿಂ, ಬೌದ್ಧ, ಕ್ರೈಸ್ತ ಎಂಬ ಯಾವುದೇ ಭೇದಭಾವವಿಲ್ಲದೆ ಭಕ್ತರು ಶ್ರದ್ಧೆಯಿಂದ ಬಂದು ತಮ್ಮ ಭಕ್ತಿಗನುಗುಣವಾಗಿ ನಡೆದುಕೊಂಡು ಬರುತ್ತಿದ್ದಾರೆ ಎಂದರು.
ದೇಶಕ್ಕೆ ಕಾಫಿ ಬೆಳೆಯನ್ನು ಪರಿಚಯಿಸಿದ ಬಾಬಾಬುಡನ್ ಅವರ ದರ್ಗಾ ಕೂಡ ಇಲ್ಲಿದೆ. ಈ ಪ್ರದೇಶದ ಸುತ್ತಲಿನ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ಕಾಫಿ ಕೊಯ್ಲಿನ ನಂತರ ಕಾಫಿ ಬೀಜ, ಹೂಗಳನ್ನು ಈ ಸಮಾದಿಗೆ ಅರ್ಪಿಸುವ ಪರಿಪಾಠ ಇಲ್ಲಿದೆ. ಈ ಪ್ರದೇಶಕ್ಕೆ ಮುಜರಾಯಿ ಇಲಾಖೆಯವರು ಗೇಟಿಗೆ ಬೀಗ ಹಾಕುತ್ತಿದ್ದು, ಯಾರಾದರೂ ಭಕ್ತರು ಒಳಗೆ ಹೋಗಲು ಇಚ್ಚಿಸಿದಲ್ಲಿ ಇಲಾಖೆಯವರು ಬೀಗ ತೆಗೆದು ಅವರುಗಳನ್ನು ಒಳಗೆ ಬಿಟ್ಟು ಅವರು ಪೂಜೆ ಸಲ್ಲಿಸಿದ ನಂತರ ಪುನಃ ಗೇಟಿಗೆ ಬೀಗ ಹಾಕುತ್ತಾರೆ ಎಂದು ತಿಳಿಸಿದರು.
ಅದೇ ರೀತಿ ಅ.20ರಂದು ಕೆಲವರು ಗೇಟಿನ ಬೀಗ ತೆಗೆಸಿ ಒಳಗೆ ತೆರಳಿ ಪ್ರಾರ್ಥಿಸಿ ಬಂದಿದ್ದಾರೆ. ಆದರೆ ಶ್ರೀರಾಮಸೇನೆಯವರು ಜನರಲ್ಲಿ ಕೋಮುಭಾವನೆ ಕೆರಳಿಸುವ ಉದ್ದೇಶದಿಂದ ಇದನ್ನು ದೊಡ್ಡ ವಿವಾದವಾಗಿಸುವ ಯತ್ನ ಮಾಡುತ್ತಿದ್ದಾರೆ. ಜನರಲ್ಲಿ ಭಯ ಹುಟ್ಟಿ ಬೇರೆ ಯಾರೂ ಅಲ್ಲಿಗೆ ಬಾರದಂತೆ ಮಾಡುವುದೇ ಅವರ ಉದ್ದೇಶವಾಗಿದೆ. ಜಿಲ್ಲಾಡಳಿತ ಇಂತಹ ಸುಳ್ಳು ಆರೋಪ ಮಾಡಿ ಕೋಮುಭಾವನೆ ಕೆರಳಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶ್ರೀರಾಮಸೇನೆ ಕಾರ್ಯಕರ್ತರು ಕೇವಲ ಸುಳ್ಳು ಆರೋಪ ಮಾಡುತ್ತಿರುವುದಲ್ಲದೇ, ದರ್ಗಾದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಜರಾಯಿ ಇಲಾಖೆ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಇದೇ ವೇಳೆ ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣಮೂರ್ತಿ, ಯೂಸುಫ್ ಹಾಜಿ, ಅಸ್ಮತ್, ಚಾಂದ್ ಪಾಷ, ಟಿ.ಎಲ್.ಗಣೇಶ್ ಇತರರು ಉಪಸ್ಥಿತರಿದ್ದರು.







