ಸಮುದ್ರದಲ್ಲಿ ಬಿರುಗಾಳಿಗಳನ್ನು ಎದುರಿಸಿ 28 ದಿನಗಳ ನಂತರ ದಡ ತಲುಪಿದ ಅಮೃತ್
ಜೊತೆಗಿದ್ದವ ಹಸಿವಿನಿಂದ ಮೃತಪಟ್ಟಿದ್ದ...

Photo: www.hindustantimes.com
ಭುವನೇಶ್ವರ್, ಅ.26: ಒಡಿಶಾದ ಖಿರಿಸಾಹಿ ಎಂಬ ಕರಾವಳಿ ಗ್ರಾಮದಲ್ಲಿ ಶುಕ್ರವಾರ ಹಾನಿಗೀಡಾಗಿದ್ದ ಬೋಟ್ ನೊಂದಿಗೆ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಶಹೀದ್ ದ್ವೀಪ್ ಎಂಬಲ್ಲಿನ 49 ವರ್ಷದ ವ್ಯಕ್ತಿ ಅಮೃತ್ ಕುಜೂರ್ ಕೂಡ ದಡ ಸೇರಿದ್ದಾರೆ.
ಈ ವ್ಯಕ್ತಿ 28 ದಿನಗಳಿಂದ ನಾಪತ್ತೆಯಾಗಿದ್ದರು.ಅವರ ಜತೆಗಿದ್ದವ ಹಸಿವಿನಿಂದ ಸಾವನ್ನಪ್ಪಿದ್ದರೆ, ಅಮೃತ್ ಬಂಗಾಳ ಕೊಲ್ಲಿಯಲ್ಲಿ ಎರಡು ಬಿರುಗಾಳಿಯನ್ನು ಎದುರಿಸಿಯೂ ಬಚಾವಾಗಿದ್ದಾರೆ.
ಅಂಡಮಾನ್ ಸಮೀಪದ ಹಡಗುಗಳಲ್ಲಿರುವವರಿಗೆ ನೀರು ಹಾಗೂ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಅಮೃತ್ ಮತ್ತು ದಿವ್ಯರಂಜನ್ ಎಂಬವರು ಸೆಪ್ಟೆಂಬರ್ 28ರಂದು 5 ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ಬೋಟಿನಲ್ಲಿ ಹೇರಿ ಹೊರಟಾಗ ಬಿರುಗಾಳಿ ಎದುರಾಗಿತ್ತು. ಬೋಟ್ ಮುಳುಗಡೆಯಾಗುತ್ತಿದ್ದಂತೆಯೇ ಅದರ ಎಲ್ಲಾ ಇಂಧನ ನೀರು ಸೇರಿತ್ತು.
ಸಂಪರ್ಕ ಸಾಧನಗಳೂ ವಿಫಲವಾದ ನಂತರ ಇಬ್ಬರೂ ಬೋಟಿನಲ್ಲಿದ್ದ ವಸ್ತುಗಳನ್ನೆಲ್ಲಾ ನೀರಿಗೆ ಚೆಲ್ಲಿ ಹತ್ತಿರದಿಂದ ಹಾದು ಹೋಗುವ ಹಡಗುಗಳಿಂದ ಸಹಾಯ ಯಾಚಿಸಿದರೂ ಯಾರ ಗಮನಕ್ಕೂ ಅದು ಬಂದಿರಲಿಲ್ಲ. ಕೊನೆಗೆ ಬರ್ಮಾದ ನೌಕಾದಳದ ಹಡಗಿನವರು ಇವರಿಗೆ 260 ಲೀಟರ್ ಇಂಧನ ಹಾಗೂ ದಿಕ್ಕು ಪತ್ತೆ ಹಚ್ಚಲು ಕಂಪಾಸ್ ಒದಗಿಸಿದ್ದರು.
ಆದರೆ ಮುಂದೆ ಸಾಗುವಾಗ ಬಂಗಳ ಕೊಲ್ಲಿಯಲ್ಲಿ ಇನ್ನೊಂದು ಬಿರುಗಾಳಿಯೆದ್ದು ಬೋಟ್ ಮತ್ತೆ ಹಾನಿಗೀಡಾಗಿತ್ತು. ಹಲವು ದಿನ ಅನ್ನ ನೀರಿಲ್ಲದೆ ದಿವ್ಯರಂಜನ್ ಮೃತಪಟ್ಟಿದ್ದರು. ತಿನ್ನಲು ಏನೂ ಇಲ್ಲದೆ ಅಮೃತ್ ಮಳೆ ನೀರಿನಿಂದ ಒದ್ದೆಯಾಗಿದ್ದ ಟವೆಲ್ ಹಿಂಡಿ ನೀರು ಕುಡಿದು ಬದುಕುಳಿದಿದ್ದ. ಕೆಲವೊಮ್ಮೆ ಸಮುದ್ರದ ಉಪ್ಪು ನೀರು ಕುಡಿಯುತ್ತಿದ್ದ. ದಿವ್ಯರಂಜನ್ ಶವವನ್ನು ಬೋಟಿನಲ್ಲಿಯೇ ಎರಡು ದಿನ ಇರಿಸಿದರೂ ನಂತರ ಅದು ಕೊಳೆಯಲಾರಂಭಿಸಿದಾಗ ಸಮುದ್ರಕ್ಕೆಸೆದು ಈಗ ತಾನು ಅದ್ಹೇಗೋ ಬಚಾವಾಗಿ ದಡ ಸೇರಿದ್ದಾರೆ.