ಮಹಾರಾಷ್ಟ್ರ ಚುನಾವಣೆ: ನೋಟಾ ಶೇಕಡಾವಾರು ಪ್ರಮಾಣ ಏರಿಕೆ

ಮುಂಬೈ, ಅ.26: ಮಹಾರಾಷ್ಟ್ರ ವಿಧಾನಸಭೆಯ 2014ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಧಿಕ ನೋಟಾ ಮತಗಳು ಚಲಾವಣೆಯಾಗಿವೆ. ಕಳೆದ ಚುನಾವಣೆಯಲ್ಲಿ 4,60,741 ಮತದಾರರು ನೋಟಾ ಮತವನ್ನು ಚಲಾಯಿಸಿದ್ದರೆ,2019ರ ಚುನಾವಣೆಯಲ್ಲಿ 7,42,134 ಮತದಾರರು ಈ ಆಯ್ಕೆಗೆ ಮುದ್ರೆಯನ್ನೊತ್ತಿದ್ದಾರೆ.
ಒಟ್ಟು ಚಲಾವಣೆಯಾಗಿರುವ ಮತಗಳ ಪೈಕಿ ಶೇ.1.35 ನೋಟಾ ಆಗಿದ್ದರೆ,ಹಿಂದಿನ ಚುನಾವಣೆಯಲ್ಲಿ ಈ ಪ್ರಮಾಣ ಶೇ.0.91ರಷ್ಟಿತ್ತು. ಲಾತೂರು ಮತ್ತು ಪಲೂಸ್-ಕಡೆಗಾಂವ್ ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಾ ಮತಗಳು ಎರಡನೇ ಸ್ಥಾನಗಳಲ್ಲಿವೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆಯ ಆದಿತ್ಯ ಠಾಕ್ರೆ ಸ್ಪರ್ಧಿಸಿದ್ದ ನಾಗ್ಪುರ ಮತ್ತು ಮುಂಬೈನ ವರ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಕ್ರಮವಾಗಿ 3,064 ಮತ್ತು 6,305 ನೋಟಾ ಮತಗಳು ಚಲಾವಣೆಯಾಗಿವೆ.
ಸರ್ವೋಚ್ಚ ನ್ಯಾಯಾಲಯದ 2013ರ ಆದೇಶದಂತೆ ಮಹಾರಾಷ್ಟ್ರದಲ್ಲಿ 2014ರ ಚುನಾವಣೆಯಲ್ಲಿ ನೋಟಾ ಮತವನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು.
Next Story





