ಕಾಫಿನಾಡಿನಲ್ಲಿ ನಿಲ್ಲದ ಮಳೆ ಆರ್ಭಟ: ಮನೆ ಮೇಲೆ ಮರ ಉರುಳಿ 8 ಕಾರ್ಮಿಕರಿಗೆ ಗಾಯ

ಚಿಕ್ಕಮಗಳೂರು, ಅ.26: ಜಿಲ್ಲೆಯಾದ್ಯಂತ ಶುಕ್ರವಾರ ಭಾರೀ ಅನಾಹುತಗಳಿಗೆ ಕಾರಣವಾಗಿದ್ದ ಮಳೆ ಶನಿವಾರವೂ ಮುಂದುವರಿದಿದೆ. ಜಿಲ್ಲೆಯ ಬಯಲುಪ್ರದೇಶ ಹಾಗೂ ಮಲೆನಾಡು ಭಾಗದ ತಾಲೂಕುಗಳಲ್ಲಿ ರಾತ್ರಿಯಿಂದ ಧಾರಾಕಾರ ಸುರಿದ ಮಳೆ ಶನಿವಾರ ಮುಂಜಾನೆಯಿಂದ ಸಂಜೆವರೆಗೂ ನಿರಂತರವಾಗಿ ಸುರಿದಿದ್ದು, ಎಡಬಿಡದೇ ಸುರಿದ ಮಳೆಯಿಂದಾಗಿ ಮೂಡಿಗೆರೆ ತಾಲೂಕಿ ಗ್ರಾಮವೊಂದರಲ್ಲಿ ಮನೆ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಅಸ್ಸಾಂ ಮೂಲದ ಎಂಟು ಕಾರ್ಮಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿರುವ ಮಳೆ ಶುಕ್ರವಾರ ಬಿರುಗಾಳಿಯೊಂದಿಗೆ ಜಿಲ್ಲಾದ್ಯಂತ ಅಬ್ಬರಿಸಿದ್ದು, ಭಾರೀ ಅನಾಹುತಕ್ಕೆ ಕಾರಣವಾಗಿತ್ತು. ಆದರೆ ಶನಿವಾರ ಮುಂಜಾನೆಯಿಂದ ಧಾರಾಕಾರ ಮಳೆ ಸುರಿದಿದ್ದರೂ ಬಿರುಗಾಳಿಯ ಅಬ್ಬರ ಇರದ ಕಾರಣಕ್ಕೆ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿತ್ತು. ಜಿಲ್ಲೆಯ ಏಳೂ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಮಳೆಯಾಗಿದ್ದು, ತರೀಕೆರೆ, ಕಡೂರು ತಾಲೂಕುಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಆದರೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಜಾನೆಯಿಂದ ಸಂಜೆವರೆಗೂ ಧಾರಾಕಾರವಾಗಿ ಮಳೆ ಸುರಿದಿದ್ದು, ಸಂಜೆ ನಂತರ ಆರ್ಭಟ ಕಡಿಮೆಯಾಗಿತ್ತು.
ಮೂಡಿಗೆರೆ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿರುವ ಮಾರ್ಟಿನ್ ಎಂಬವರ ಎಸ್ಟೇಟ್‍ನಲ್ಲಿ ಕಾರ್ಮಿಕರು ವಾಸವಿದ್ದ ಲೈನ್ ಮನೆ ಮೇಲೆ ಬೃಹತ್ ಮರವೊಂದು ಉರುಳಿಬಿದ್ದ ಪರಿಣಾಮ ಮನೆಯಲ್ಲಿದ್ದ 8 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಮೂಡಿಗೆರೆ, ಬಣಕಲ್‍ನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕಾರ್ಮಿಕರು ಅಸ್ಸಾಂ ಮೂಲದವರೆಂದು ತಿಳಿದು ಬಂದಿದ್ದು, ಕೆಲ ತಿಂಗಳುಗಳಿಂದ ಈ ಎಸ್ಟೇಟ್‍ನಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮಾಡುತ್ತಾ ತೋಟದ ಮನೆಯಲ್ಲೇ ಉಳಿದುಕೊಂಡಿದ್ದರೆಂದು ತಿಳಿದು ಬಂದಿದೆ.
ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಘಾಟ್ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಧಟ್ಟ ಮಂಜು ಆವರಿಸಿದ್ದು, ಲಘು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರವೂ ವಿರಳವಾಗಿದೆ. ತಾಲೂಕಿನ ಕಳಸ, ಕುದುರೆಮುಖ, ಜಾವಳಿ, ಹಿರೇಬೈಲ್, ಬಾಳೆಹೊಳೆ, ಹಳುವಳ್ಳಿ, ಬಾಳೂರು, ಕೂವೆ, ಜನ್ನಾಪುರ, ಕಿರುಗುಂದ, ಬಣಕಲ್ ಮತ್ತಿತರ ಗ್ರಾಮಗಳಲ್ಲಿ ಶನಿವಾರ ಭಾರೀ ಮಳೆ ಸುರಿದಿದೆ.
ಇನ್ನು ಮಲೆನಾಡಿನ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದ್ದು, ನೆಮ್ಮಾರ್, ಕಿಗ್ಗಾ, ಕೆರೆಕಟ್ಟೆ, ಜಯಪುರ, ಬಿಜಿ ಕಟ್ಟೆ, ಹರಿಹರಪುರ, ಅಗಳಗಂಡಿ, ಬಾಳೆಹೊನ್ನೂರು, ಮಾಗುಂಡಿ ಮತ್ತಿತರ ಕಡೆಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ. ನಿರಂತರ ಮಳೆಯಿಂದಾಗಿ ಶೃಂಗೇರಿ, ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ, ಜಪಾವತಿ ಹಾಗೂ ಭದ್ರಾನದಿಗಳಲ್ಲೂ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ. ಮಲೆನಾಡಿನ ಕಾಫಿ, ಅಡಿಕೆ ಬೆಳೆಗಾರರು ಕೊಳೆ ರೋಗದ ಭೀತಿಯಿಂದಾಗಿ ಆತಂಕಕ್ಕೀಡಾಗಿದ್ದಾರೆ.
ಉಳಿದಂತೆ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಆಗಾಗ್ಗೆ ಧಾರಾಕಾರ ಮಳೆಯಾಗುತ್ತಿದ್ದು, ಭಾರೀ ಮಳೆಯಿಂದಾಗಿ ಈ ತಾಲೂಕು ವ್ಯಾಪ್ತಿಯಲ್ಲಿ ನೀರಿಲ್ಲದೇ ಒಣಗಿ ನಿಂತಿದ್ದ ಕೆರೆಕಟ್ಟೆಗಳು ನೀರಿನಿಂದ ಭರ್ತಿಯಾಗಿವೆ. ಕೆಲ ಕೆರೆಗಳು ಕೋಡಿಬಿದ್ದಿದ್ದು, ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಡೂರು, ತರೀಕೆರೆ ತಾಲೂಕಿನ ಈರುಳ್ಳಿ, ಆಲೂಗಡ್ಡೆ ಬೆಳೆಗಾರರು ಬೆಳೆ ಕೊಳೆಯುವ ಭೀತಿಯಿಂದ ನಲುಗಿದ್ದಾರೆ.







