‘ಎ.ಆರ್.ಟಿ. ಚಿಕಿತ್ಸೆ ವಂಚಿತರನ್ನು ಗುರುತಿಸಿ’
ಉಡುಪಿ, ಅ.26: ಜಿಲ್ಲೆಯಲ್ಲಿ ಎಚ್‌ಐವಿ ಪೀಡಿತರಾಗಿ ಎ.ಆರ್.ಟಿ. ಚಿಕಿತ್ಸೆ ಯಿಂದ ವಂಚಿತರಾದವನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜದೀಶ್ ಸೂಚನೆಗಳನ್ನು ನೀಡಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಏಡ್ಸ್ ರೋಗಿಗಳಿಗೆ ಎ.ಆರ್.ಟಿ. ಚಿಕಿತ್ಸೆ ನೀಡುವ ಮೂಲಕ ಅವರ ಜೀವಿತಾವಧಿಯನ್ನು ಹೆಚ್ಚಿಸಲು ಸಾಧ್ಯವಿದೆ. ಆದ್ದರಿಂದ ಜಿಲ್ಲೆಯಲ್ಲಿ ಗುರುತಿಸ ಲಾಗಿರುವ ಎಲ್ಲಾ ಏಡ್ಸ್ ರೋಗಿಗಳನ್ನು ಕಡ್ಡಾಯವಾಗಿ ಎಆರ್‌ಟಿ ಚಿಕಿತ್ಸೆಗೆ ಒಳಪಡಿಸುವ ಕುರಿತಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಡಿಸಿ ಸೂಚಿಸಿದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ಏಡ್ಸ್ ರೋಗಿಗಳಲ್ಲಿ 12 ಮಂದಿ ಎಆರ್‌ಟಿ ಚಿಕಿತ್ಸೆಯಿಂದ ಹೊರಗುಳಿದಿದ್ದು, ಚಿಕಿತ್ಸೆ ಪಡೆಯಲು ಬರುತ್ತಿಲ್ಲ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಚಿದಾನಂದ ಸಂಜು ತಿಳಿಸಿದರು.
ಎಆರ್‌ಟಿ ಚಿಕಿತ್ಸೆಯಿಂದ ಹೊರಗುಳಿದಿರುವ 12 ಮಂದಿಯನ್ನು ಮನ ವೊಲಿಸಿ ಚಿಕಿತ್ಸೆಗೆ ಕರೆತರುವಂತೆ ತಿಳಿಸಿದ ಡಿಸಿ, ಅಂತಹ ರೋಗಿಗಳ ವಿವರ ನೀಡಿದಲ್ಲಿ ತಾವೇ ಅವರ ಮನೆಗೆ ತೆರಳಿ ಮನವೊಲಿಸುವುದಾಗಿ ಹೇಳಿದರು. ಯಾವುದೇ ಏಡ್ಸ್ ರೋಗಿ ಚಿಕಿತ್ಸೆಯಿಂದ ವಂಚಿತರಾಗಬಾರದು. ಪ್ರತಿಯೊಬ್ಬ ರೋಗಿಯ ಜೀವವೂ ಮುಖ್ಯ. ಅಧಿಕಾರಿಗಳು ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದವರು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ ಗುರುತಿಸಲಾಗಿರುವ ಏಡ್ಸ್ ರೋಗಿಗಳ ವಿವರ, ಮರಣ ಹೊಂದಿದವರ ವಿವರ, ಬೇರೆ ಜಿಲ್ಲೆಗೆ ತೆರಳಿರುವವರ ವಿವರ, ಚಿಕಿತ್ಸೆ ಪಡೆಯುತ್ತಿರುವವರ ಕುರಿತು ಸಮಗ್ರ ವಿವರಗಳನ್ನು ನೀಡುವಂತೆ ಜಗದೀಶ್ ಸೂಚಿಸಿದರು.
ಉಡುಪಿ ಜಿಲ್ಲೆಯಲ್ಲಿ 2008ರಿಂದ ಇದುವರೆಗೆ 6406 ಏಡ್ಸ್ ಪ್ರಕರಣ ಪತ್ತೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 31863 ಮಂದಿಯನ್ನು ಪರೀಕ್ಷಿಸಿದ್ದು, 116 ಎಚ್‌ಐವಿ ಪಾಸಿಟಿವ್ ಪ್ರಕರಣ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಸೆಲ್ವರಾಜ್, ಡಿಹೆಚ್‌ಓ ಡಾ.ಅಶೋಕ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







