ಈ ರಾಜ್ಯದ 176 ನೂತನ ಶಾಸಕರು ಕ್ರಿಮಿನಲ್ ಪ್ರಕರಣಗಳ ಸರದಾರರು !

ಮುಂಬೈ, ಅ.26: ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪೈಕಿ 176 ಜನರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಹಿರಂಗಗೊಳಿಸಿದೆ.
ಒಟ್ಟು 288 ಶಾಸಕರ ಪೈಕಿ 285 ಶಾಸಕರು ತಮ್ಮ ನಾಮಪತ್ರಗಳ ಜೊತೆಗೆ ಸಲ್ಲಿಸಿರುವ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿರುವ ಎಡಿಆರ್,ಶೇ.62ರಷ್ಟು ಅಂದರೆ 176 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿಯಿದ್ದು, ಈ ಪೈಕಿ 113 ಶಾಸಕರು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ. ಇತರ ಮೂವರ ಸಂಪೂರ್ಣ ದಾಖಲೆಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲದ್ದರಿಂದ ಅವರ ಪ್ರಮಾಣಪತ್ರಗಳ ವಿಶ್ಲೇಷಣೆ ಸಾಧ್ಯವಾಗಿಲ್ಲ ಎಂದಿದೆ.
2014ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಶಾಸಕರ ಪೈಕಿ 165 ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರು ಮತ್ತು ಇವರಲ್ಲಿ 115 ಜನರು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದರು.
ಹಿಂದಿನ ವಿಧಾನಸಭೆಗೆ ಹೋಲಿಸಿದರೆ ಹಾಲಿ ವಿಧಾನಸಭೆಯು ಅಧಿಕ ಮಿಲಿಯಾಧೀಶರನ್ನು ಹೊಂದಿದೆ. ಹಿಂದಿನ ವಿಧಾನಸಭೆಯಲ್ಲಿ ಇಂತಹವರ ಸಂಖ್ಯೆ 253 (ಶೇ.88) ಆಗಿದ್ದರೆ,ಹಾಲಿ ಅವರ ಸಂಖ್ಯೆ 264 (ಶೇ.93) ಆಗಿದೆ.
ನೂತನ ವಿಧಾನಸಭೆಯಲ್ಲಿ ಶಾಸಕರ ಸರಾಸರಿ ಆಸ್ತಿಗಳ ವೌಲ್ಯ 22.42 ಕೋ.ರೂ.ಆಗಿದ್ದು, 2014ರಲ್ಲಿ ಇದು 10.87 ಕೋ.ರೂ.ಆಗಿತ್ತು. 2019ರ ಚುನಾವಣೆಯಲ್ಲಿ ಕನಿಷ್ಠ 118 ಶಾಸಕರು ಪುನರಾಯ್ಕೆಗೊಂಡಿದ್ದು,ಇವರು ಸರಾಸರಿ 25.86 ಕೋ.ರೂ.ವೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಎಡಿಆರ್ ತಿಳಿಸಿದೆ.







