ಹಡಿನಬಾಳ ಶ್ರೀಪಾದ ಹೆಗಡೆಗೆ ‘ಚಿಟ್ಟಾಣಿ ಪ್ರಶಸ್ತಿ’ ಪ್ರದಾನ

ಉಡುಪಿ, ಅ.26: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಚಿಟ್ಟಾಣಿ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ರಾಜಾಂಗಣ ದಲ್ಲಿ ನಡೆದ ಚಿಟ್ಟಾಣಿ ಸಂಸ್ಮರಣಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ವೇಷಧಾರಿ ಹಡಿನಬಾಳ ಶ್ರೀಪಾದ ಹೆಗಡೆಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಪ್ರಶಸ್ತಿ ಮತ್ತು ಹವ್ಯಾಸಿ ಭಾಗವತ ಪ್ರವೀಣ್ ಕುಮಾರ್ ನಂದಳಿಕೆಗೆ ಟಿ.ವಿ.ರಾವ್ ಪ್ರಶಸ್ತಿಯನ್ನು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು. ಹಡಿನಬಾಳ ಶ್ರೀಪಾದ ಹೆಗಡೆಯ ಅನುಪಸ್ಥಿತಿಯಲ್ಲಿ ಅವರ ಪುತ್ರ ಶ್ರೀಶ ಹೆಗಡೆ ಪ್ರಶಸ್ತಿ ಸ್ವೀಕರಿಸಿದರು.
ಪಲಿಮಾರುಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್, ಹೈಟೆಕ್ ಆಸ್ಪತ್ರೆಯ ನಿರ್ದೇಶಕ ಡಾ.ಟಿ.ಎಸ್.ರಾವ್, ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ಸಂಚಾಲಕ ಸುಬ್ರಹ್ಮಣ್ಯ ಚಿಟ್ಟಾಣಿ ಮುಖ್ಯ ಅತಿಥಿಗಳಾಗಿದ್ದರು.
ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ.ಗೋಪಿಕೃಷ್ಣ ರಾವ್, ಚಿಟ್ಟಾಣಿ ಅಭಿಮಾನಿ ಎಂ.ಗಂಗಾ ಧರ್ ರಾವ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ವೇದಿಕೆಯಲ್ಲಿದ್ದರು. ನಾರಾಯಣ ಎಂ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.







