2017ರಲ್ಲಿ ದೇಶದಲ್ಲಿ ಮಕ್ಕಳ ವಿರುದ್ಧ ಪ್ರತಿ ದಿನ 350 ಅಪರಾಧಗಳು: ‘ಕ್ರೈ’ ವರದಿ

ಹೊಸದಿಲ್ಲಿ, ಅ.26: 2017ರಲ್ಲಿ ದೇಶದಲ್ಲಿ ಮಕ್ಕಳ ವಿರುದ್ಧ ಪ್ರತಿ ದಿನ 350 ಅಪರಾಧಗಳು ನಡೆದಿದ್ದವು ಮತ್ತು ಈ ವಿಷಯದಲ್ಲಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದ್ದವು ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ‘ದಿ ಚೈಲ್ಡ್ ರೈಟ್ಸ್ ಆ್ಯಂಡ್ ಯು (ಕ್ರೈ)’ ಹೇಳಿದೆ.
2016ನೇ ಸಾಲಿಗೆ ಹೋಲಿಸಿದರೆ 2017ರಲ್ಲಿ ಮಕ್ಕಳ ವಿರುದ್ಧದ ಅಪರಾಧಗಳು ಶೇ.20ರಷ್ಟು ಏರಿಕೆಯಾಗಿದ್ದನ್ನು ಇತ್ತೀಚಿಗೆ ಬಿಡುಗಡೆಗೊಂಡಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ ದತ್ತಾಂಶಗಳು ಬಹಿರಂಗಗೊಳಿಸಿವೆ ಎಂದು ಕ್ರೈ ಹೇಳಿದೆ. ಈ ಅವಧಿಯಲ್ಲಿ ಭಾರತದಲ್ಲಿ ಒಟ್ಟಾರೆ ಅಪರಾಧಗಳಲ್ಲಿ ಶೇ.3.6ರಷ್ಟು ಏರಿಕೆಯಾಗಿದೆ.
2007-2017ರ ಅವಧಿಯಲ್ಲಿ ಮಕ್ಕಳ ವಿರುದ್ಧ ಅಪರಾಧ ದರವು ಶೇ.1.8ರಿಂದ ಶೇ.28.9ಕ್ಕೆ ಏರಿಕೆಯಾಗಿದೆ ಎನ್ನುವುದನ್ನು ಎನ್‌ಸಿಆರ್‌ಬಿಯ ದತ್ತಾಂಶಗಳು ಪ್ರಮುಖವಾಗಿ ಬಿಂಬಿಸಿವೆ ಎಂದು ಕ್ರೈ ತಿಳಿಸಿದೆ. ಎರಡು ವರ್ಷಗಳ ವಿರಾಮದ ಬಳಿಕ ಬಿಡುಗಡೆಗೊಂಡಿರುವ ಎನ್‌ಸಿಆರ್‌ಬಿ ದತ್ತಾಂಶಗಳಂತೆ 2016ರಲ್ಲಿ 1,06,958ರಷ್ಟಿದ್ದ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆ 2017ರಲ್ಲಿ 1,29,032ಕ್ಕೇರಿದೆ. ಅಂದರೆ ದೇಶದಲ್ಲಿ ಪ್ರತಿದಿನ ಮಕ್ಕಳ ವಿರುದ್ಧ 350ಕ್ಕೂ ಹೆಚ್ಚು ಅಪರಾಧಗಳು ನಡೆದಿವೆ.
ಈ ಪೈಕಿ ಶೇ.14.8ರಷ್ಟು ಅಂದರೆ 19,000 ಪ್ರಕರಣಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಿಂದ ವರದಿಯಾಗಿವೆ. 2016 ಮತ್ತು 2017ರ ನಡುವೆ ಜಾರ್ಖಂಡ್ ಗರಿಷ್ಠ ಏರಿಕೆ (ಶೇ.73.9)ಯನ್ನು ಕಂಡಿದ್ದರೆ ಮಣಿಪುರದಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಶೇ.18.7ರಷ್ಟು ಕಡಿಮೆಯಾಗಿವೆ.
2016ಕ್ಕೆ ಹೋಲಿಸಿದರೆ 2017ರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಖರೀದಿ ಪ್ರಕರಣಗಳಲ್ಲಿ ಶೇ.37ರಷ್ಟು ಏರಿಕೆ ದಾಖಲಾಗಿದೆ ಎಂದು ಕ್ರೈ ತಿಳಿಸಿದೆ. ಅಗ್ರ ಐದು ರಾಷ್ಟ್ರಗಳ ಸಾಲಿಗೆ ಜಾರ್ಖಂಡ್ ಹೊಸದಾಗಿ ಸೇರ್ಪಡೆಯಾಗಿದೆ. ಅಪ್ರಾಪ್ತ ವಯಸ್ಕ ಬಾಲಕಿಯರ ಖರೀದಿಯ ಶೇ.60ರಷ್ಟು ಪ್ರಕರಣಗಳು ಹರ್ಯಾಣ ಮತ್ತು ಅಸ್ಸಾಮ್‌ಗಳಿಂದ ವರದಿಯಾಗಿದೆ ಎಂದಿದೆ.
ತನ್ಮಧ್ಯೆ ಮಕ್ಕಳ ಅಪಹರಣ ಪ್ರಮುಖ ಅಪರಾಧವಾಗಿ ಮುಂದುವರಿದಿದ್ದು, 2017ರಲ್ಲಿ ಒಟ್ಟೂ ಪ್ರಕರಣಗಳಲ್ಲಿ ಅದರ ಪಾಲು ಶೇ.42 (54,163)ರಷ್ಟಿತ್ತು. ಇದರಲ್ಲಿ ಐದು ಅಗ್ರರಾಷ್ಟ್ರಗಳ ಸಾಲಿಗೆ ಬಿಹಾರ ಹೊಸದಾಗಿ ಸೇರ್ಪಡೆಗೊಂಡಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಐದನೇ ಸ್ಥಾನದಲ್ಲಿದೆ. ಆದರೆ 2016ಕ್ಕೆ ಹೋಲಿಸಿದರೆ ಇಂತಹ ಪ್ರಕರಣಗಳಲ್ಲಿ ಶೇ.1ರಷ್ಟು ಇಳಿಕೆ ಕಂಡುಬಂದಿದೆ ಎಂದು ಕ್ರೈ ತಿಳಿಸಿದೆ.
ಭಾರತದಲ್ಲಿ ಬಾಲ್ಯವಿವಾಹದ ಪಿಡುಗು ಮಕ್ಕಳ ಸಬಲೀಕರಣಕ್ಕೆ ಪ್ರಮುಖ ಅಡ್ಡಿಯಾಗಿದ್ದು, 2011ರ ಜನಗಣತಿಯಂತೆ ದೇಶದಲ್ಲಿ ಸುಮಾರು 12 ಮಿಲಿಯನ್ ವಿವಾಹಿತ ಮಕ್ಕಳಿದ್ದಾರೆ ಮತ್ತು ಈ ಪೈಕಿ ಶೇ.25ರಷ್ಟು ಬಾಲಕಿಯರಾಗಿದ್ದಾರೆ ಎಂದಿದೆ. 2017ರಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ 395 ಪ್ರಕರಣಗಳು ದಾಖಲಾಗಿವೆ.
2016ಕ್ಕೆ ಹೋಲಿಸಿದರೆ 2017ರಲ್ಲಿ ಪೊಕ್ಸೊ ಪ್ರಕರಣಗಳಲ್ಲಿಯೂ ಏರಿಕೆಯಾಗಿದೆ.







