ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 20 ಎಕರೆ ಭೂಮಿ ನೀಡಿದ ಇಸ್ಲಾಮಿಕ್ ಕಾಲೇಜು

ನಾಗಪಟ್ಟಿಣಂ, ಅ. 26: ಮೈಯಿಲದುತುರೈಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು 20 ಎಕರೆ ಭೂಮಿ ನೀಡಲು ಮೈಯಿಲದುತುರೈಯ ಇಸ್ಲಾಮಿಕ್ ಕಾಲೇಜು ಮುಂದೆ ಬಂದಿದೆ.
ಮೈಯಿಲದುತುರೈ ಸಮೀಪದ ನಿದೂರ್‌ನ ಜಾಮಿಯಾ ಮಿಸ್ಬಾಹುಲ್ ಹುದಾ ಅರೇಬಿಕ್ ಕಾಲೇಜಿನ ಸದಸ್ಯರ ಸಹಿತ 8 ಮಂದಿ ಸದಸ್ಯರು ನಾಗಪಟ್ಟಿಣಂನ ಜಿಲ್ಲಾಧಿಕಾರಿ ಪ್ರವೀಣ್ ಪಿ. ನಾಯರ್ ಅವರನ್ನು ಗುರುವಾರ ಭೇಟಿಯಾದರು. ಅಲ್ಲದೆ, ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ಮೈಯಿಲದುತುರೈಯಲ್ಲಿ ಭೂಮಿ ನೀಡಲು ಒಪ್ಪಿಗೆ ನೀಡಿದರು.
‘‘ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಇಲ್ಲದೆ, ಸಾರ್ವಜನಿಕರ ಕಲ್ಯಾಣಕ್ಕಾಗಿ 21 ಎಕರೆ ಭೂಮಿಯನ್ನು ದಾನವಾಗಿ ನೀಡಲು ನಾವು ಬಯಸುತ್ತೇವೆ. ಸರಕಾರಕ್ಕೆ ಒಂದು ವೇಳೆ ಸಾಕಷ್ಟು ಭೂಮಿ ದೊರೆಯದೇ ಇದ್ದರೆ, ನಾವು ಭೂಮಿ ನೀಡಿದರೆ ವೈದ್ಯಕೀಯ ಕಾಲೇಜು ಇಲ್ಲಿ ನಿರ್ಮಾಣವಾಗಬಹುದು ಎಂಬುದು ನಮಗೆ ಅರಿವಾದ ಬಳಿಕ ನಾವು ಈ ನಿರ್ಧಾರ ತೆಗೆದುಕೊಂಡೆವು’’ ಎಂದು ನಿಧೂರ್‌ನ ಜಾಮಿಯಾ ಮಿಸ್ಬಾಹುಲ್ ಹುದಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಎ. ಮುಹಮ್ಮದ್ ಸಾದಿಕ್ ಹೇಳಿದ್ದಾರೆ.
ಇನ್ನು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಇಲ್ಲಿನ ಜನರ ಆಕಾಂಕ್ಷೆಯನ್ನು ಸರಕಾರ ಈಡೇರಿಸಬೇಕು ಎಂದು ಅವರು ಹೇಳಿದ್ದಾರೆ.





