ವಿದ್ಯಾರ್ಥಿಯ ಅಪಹರಣ ಯತ್ನ: ಮಹಿಳೆ ಸಹಿತ ಮೂವರ ಬಂಧನ
ಮಣಿಪಾಲ, ಅ.26: ಮಣಿಪಾಲ ಮಸೀದಿ ಬಳಿ ಅ.25ರಂದು ಮಧ್ಯಾಹ್ನ ವೇಳೆ ವಿದ್ಯಾರ್ಥಿಯ ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮುಲ್ಕಿಯ ದರ್ಗಾ ರಸ್ತೆಯ ಅಶ್ರಫ್ ಅಲಿ(59), ನಿಖಾತ್ ಕತೂನ್(32) ಹಾಗೂ ಮಂಗಳೂರು ಪಾಂಡೇಶ್ವರದ ಮುಹಮ್ಮದ್ ಶರೀಫ್(49) ಬಂಧಿತ ಆರೋಪಿಗಳು. ಇವರು ಕಾಪು ಮಲ್ಲಾರ್ ಕೋಟೆ ರಸ್ತೆಯ ಅಬ್ದುಲ್ಲಾ ಖಾಝಿ (18) ಎಂಬಾತನನ್ನು ಆತನ ತಂದೆಯ ಮೇಲಿನ ಧ್ವೇಷದಿಂದ ಬಲವಂತವಾಗಿ ರಿಕ್ಷಾದಲ್ಲಿ ಕೂರಿಸಿ ಅಹರಣಕ್ಕೆ ಪ್ರಯತ್ನ ನಡೆಸಿದ್ದರು ಎಂದು ದೂರಲಾಗಿದೆ.
ಈ ವೇಳೆ ಆತನ ಗೆಳೆಯರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಸೇರಿ ಅಪಹರಣಕಾರರನ್ನು ತಡೆದು ಅಬ್ದುಲ್ಲಾ ಖಾಝಿಯನ್ನು ರಕ್ಷಿಸಿದ್ದಾರೆ. ಈ ಬಗ್ಗೆ ಅಬ್ದುಲ್ಲಾ ಖಾಝಿ ನೀಡಿದ ದೂರಿನಂತೆ ಅದೇ ದಿನ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ವೇಳೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಮೂವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
Next Story





