ಖಾಸಗೀಕರಣದ ವಿರುದ್ಧ ನಿರಂತರ ಹೋರಾಟ: ಬಿಇಎಂಎಲ್ ಕಾರ್ಮಿಕರಿಂದ ಕೇಂದ್ರ ಸರಕಾರಕ್ಕೆ ಎಚ್ಚರಿಕೆ

ಬೆಂಗಳೂರು, ಅ.26: ಲಾಭದಾಯಕ ಕಂಪನಿಗಳಲ್ಲಿ ಒಂದಾಗಿರುವ ಬಿಇಎಂಎಲ್‌ನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರಕಾರ ತನ್ನ ನಿರ್ಧಾರ ಕೈಬಿಡುವವರೆಗೂ ಹೋರಾಟ ನಿರಂತರವಾಗಿ ಮುಂದುವರೆಸಲಾಗುವುದು ಎಂದು ಕಾರ್ಮಿಕರು ಎಚ್ಚರಿಕೆ ನೀಡಿದರು.
ನಗರದಲ್ಲಿಂದು ಪುರಭವನ ಮುಂಭಾಗ ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಕಾರ್ಮಿಕರು, ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಬಿಇಎಂಎಲ್ ಕಾರ್ಖಾನೆಯು ಕೇಂದ್ರ ಸರಕಾರದ ರಕ್ಷಣಾ ಮಂತ್ರಾಲಯದ ಅಧೀನದಲ್ಲಿದ್ದು, ಸುಮಾರು 53 ವರ್ಷಗಳಿಂದ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದೆ. ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉತ್ಕೃಷ್ಟವಾದ ಉತ್ಪನ್ನ ತಯಾರಿಸುವಲ್ಲಿ ದೇಶ, ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಇಂತಹ ಸಂಸ್ಥೆಯನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸುತ್ತಿರುವುದು ಸರಿಯಲ್ಲವೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಂಗಳೂರು ಕೇಂದ್ರ ಭಾಗದ ಕಾರ್ಮಿಕರ ಸಂಘದ ಅಧ್ಯಕ್ಷರು ದೊಮ್ಮಲೂರು ಶ್ರೀನಿವಾಸ ರೆಡ್ಡಿ, ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಈಗಾಗಲೇ ಬಿಇಎಂಲ್ ಕಾರ್ಖಾನೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ನಿರ್ಧಾರದ ವಿರುದ್ಧ ಒಗ್ಗಟ್ಟು ಹಾಗೂ ಪ್ರತಿಭಟನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಇಂದು ಪುರಭವನದ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯುವಲ್ಲಿ ವಿಳಂಬ ಮಾಡಿದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಆರ್. ನಾರಾಯಣ್, ಕೆಜಿಎಫ್ ಯೂನಿಯನ್ ಅಧ್ಯಕ್ಷ ಆಂಜನೇಯ ರೆಡ್ಡಿ, ಜೆ.ಮುನಗಪ್ಪಾ, ಮೈಸೂರು ಯೂನಿಯನ್ ಮುನಿರೆಡ್ಡಿ, ಪಾಲಕ್ಕಾಡ್ ಯೂನಿಯನ್ ಅಧ್ಯಕ್ಷ ಮಲ್ಲಿಕಾರ್ಜುನ ಸೇರಿ ಪ್ರಮುಖರಿದ್ದರು.










