ಆಭರಣ ಮೇಳದಲ್ಲಿದ್ದ 13.34 ಕೋಟಿ ರೂ. ಮೌಲ್ಯದ ಅಮೂಲ್ಯ ವಜ್ರ ಕಳವು

ಟೋಕಿಯೋ,ಅ.25: ಇಲ್ಲಿಗೆ ಸಮೀಪದ ಯೋಕೊಹಾಮಾದಲ್ಲಿ ಅಂತಾರಾಷ್ಟ್ರೀಯ ಆಭರಣ ವ್ಯಾಪಾರ ಮೇಳದಲ್ಲಿ ಸುಮಾರು 200 ಮಿಲಿಯ ಯೆನ್ (ಸುಮಾರು 13.34 ಕೋಟಿ ರೂ. ) ಬೆಲೆಬಾಳುವ ಅಮೂಲ್ಯ ವಜ್ರವೊಂದು ಕಳವಾದ ಘಟನೆ ವರದಿಯಾಗಿದೆ.
50 ಕ್ಯಾರಟ್‌ನ ವಜ್ರವು ಗುರುವಾರ ಸಂಜೆ ಗಂಟೆಯವರೆಗೆ ಗಾಜಿನ ಶೋಕೇಸ್ ಒಂದರಲ್ಲಿ ಇದ್ದಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಇದಾದ ಒಂದು ತಾಸಿನ ಬಳಿಕ ಆಭರಣ ಪ್ರದರ್ಶನ ಮುಕ್ತಾಯಗೊಂಡ ಕೆಲವೇ ಸಮಯದ ಬಳಿಕ ವಜ್ರ ನಾಪತ್ತೆಯಾಗಿರುವುದು ಪತ್ತೆಯಾಗಿತ್ತು ಹಾಗೂ ಆಭರಣವನ್ನು ಇರಿಸಲಾಗಿದ್ದ ಗಾಜಿನ ಪೆಟ್ಟಿಗೆಯನ್ನು ತೆರೆಯಲಾಗಿತ್ತು ಎಂದು ಅವರು ಹೇಳಿದ್ದಾರೆ.
ಸಂದರ್ಶಕರಿಂದ ಕಿಕ್ಕಿರಿದು ತುಂಬಿದ್ದ ಪ್ರದರ್ಶನ ಮಳಿಗೆಯು ಮುಚ್ಚುಗಡೆ ಗೊಳ್ಳುವುದಕ್ಕೆ ಕೆಲವೇ ನಿಮಿಷಗಳ ಮೊದಲು ಈ ಕಳ್ಳತನ ನಡೆದಿರುವ ಸಾಧ್ಯತೆಯಿದೆಯೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉತ್ತರ ಟೊಕಿಯೋದಲ್ಲಿ ಕಾರ್ಯಾಚರಿಸುತ್ತಿರುವ ಸೈತಾಮಾ ಎಂಬ ಕಂಪೆನಿಯು ಈ ಮಿನುಗುವ ವಜ್ರವನ್ನು ಆಭರಣ ಮೇಳದಲ್ಲಿ ಪ್ರದರ್ಶನಕ್ಕಿರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲವೆಂದು ತಿಳಿದುಬಂದಿದೆ.
ಕಳವು ನಡೆಯಿತೆಂದು ಶಂಕಿಸಲಾದ ಸಮಯದಲ್ಲಿ ವ್ಯಕ್ತಿಯೊಬ್ಬ ವಜ್ರವನ್ನು ಇರಿಸಿದ್ದ ಶೋಕೇಸ್‌ನ ಬಳಿ ಬರುತ್ತಿರುವುದು ಭದ್ರತಾ ಕ್ಯಾಮರಾದ ವಿಡಿಯೋದಲ್ಲಿ ಕಂಡು ಬಂದಿದೆಯೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಅವಧಿಯ ಈ ವಸ್ತುಪ್ರದರ್ಶನವು ಪೂರ್ವನಿಗದಿಯಾದಂತೆಯೇ ಶುಕ್ರವಾರ ಅಂತ್ಯಗೊಂಡಿತ್ತು.
ಜಗತ್ತಿನಾದ್ಯಂತದ 410 ಚಿನ್ನಾಭರಣ ಅಂಗಡಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದವು ಹಾಗೂ 10 ಸಾವಿರಕ್ಕೂ ಅಧಿಕ ಮಂದಿ ಸಂದರ್ಶಕರು ಆಗಮಿಸಿದ್ದರೆಂದು ಸಂಘಟಕರು ಹೇಳಿದ್ದಾರೆ.







