ಶವ ಸಂಸ್ಕಾರಕ್ಕೆ ಜಮೀನು ಕಾಯ್ದಿರಿಸಲು ಸರಕಾರ ಸುತ್ತೋಲೆ

ಬೆಂಗಳೂರು, ಅ.26: ರಾಜ್ಯದಲ್ಲಿ ಸರಕಾರಿ ಜಮೀನು ಲಭ್ಯವಿರುವ ಕಡೆ ವಿವಿಧ ಸಾರ್ವಜನಿಕ ಶವ ಸಂಸ್ಕಾರಕ್ಕೆ ಅವಶ್ಯವಿರುವ ಜಮೀನು ಕಾಯ್ದಿರಿಸಲು ಕ್ರಮ ವಹಿಸುವಂತೆ ರಾಜ್ಯ ಸರಕಾರ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಅನೇಕ ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕಾಗಿ ಜಮೀನುಗಳ ಸೌಲಭ್ಯವಿಲ್ಲದೇ ಇರುವುದು ಸರಕಾರದ ಗಮನಕ್ಕೆ ಬಂದಿದೆ. ಈ ದಿಶೆಯಲ್ಲಿ ಜಿಲ್ಲಾಡಳಿತಗಳಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಕಲಂ 71 ಅಡಿಯಲ್ಲಿ ಜಿಲ್ಲಾಧಿಕಾರಿಗಳು ಅಗತ್ಯ ಜಮೀನು ಕಾಯ್ದಿರಿಸಲು ಅಧಿಕಾರವಿದೆ. ಅದರಂತೆ ಶವ ಸಂಸ್ಕಾರಕ್ಕೆ ಅಗತ್ಯವಿರುವ ಜಮೀನು ಕಾಯ್ದಿರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸರಕಾರದ ಸುತ್ತೋಲೆ ಅನ್ವಯ ಕನಿಷ್ಠ 18 ರಿಂದ 20 ಗುಂಟೆ ಜಮೀನು ಶವ ಸಂಸ್ಕಾರ ಉದ್ದೇಶಕ್ಕೆ ಕಾಯ್ದಿರಿಸಬೇಕು. ಸರಕಾರಿ ಜಮೀನು ಇಲ್ಲದಿದ್ದಲ್ಲಿ ಗ್ರಾಮಗಳಲ್ಲಿ ಅಗತ್ಯವಾದ ಖುಷ್ಕಿ ಜಮೀನನ್ನು ಭೂ ಮಾಲಕರಿಂದ ಮಾರ್ಗಸೂಚಿ ಬೆಲೆಯ ಮೂರುಪಟ್ಟು ಬೆಲೆಗೆ ಖರೀದಿಸಿ, ಶವಸಂಸ್ಕಾರಕ್ಕೆ ಕಾಯ್ದಿರಿಸಲು ಸೂಚಿಸಲಾಗಿದೆ.
ಹೈಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ ಈ ಸುತ್ತೋಲೆಯ ದಿನದಿಂದ ಆರು ತಿಂಗಳೊಳಗೆ ಸ್ಮಶಾನ ಭೂಮಿ ಅಗತ್ಯವಿರುವ ಗ್ರಾಮ ಮತ್ತು ನಗರಗಳಿಗೆ ಸ್ಮಶಾನ ಭೂಮಿ ಸೌಲಭ್ಯ ಒದಗಿಸುವ ಸಂಬಂಧ ಅಗತ್ಯ ಜಮೀನು ಕಾಯ್ದಿರಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಒತ್ತುವರಿಯಾಗಿ ತೆರವುಗೊಳಿಸಲು ಬಾಕಿಯಿರುವ ಸರಕಾರಿ ಭೂಮಿಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಕ್ರಮ ವಹಿುವಂತೆ ರಾಜ್ಯ ಸರಕಾರ ಆದೇಶಿಸಿದೆ.







