ದಾರಿ ವಿವಾದಕ್ಕೆ ಪರಸ್ಪರ ಹಲ್ಲೆ: ಇತ್ತಂಡಗಳಿಂದ ದೂರು
ಉಪ್ಪಿನಂಗಡಿ: ದಾರಿ ವಿವಾದಕ್ಕೆ ಸಂಬಂಧಿಸಿ ಪರಸ್ಪರ ಇತ್ತಂಡಗಳು ಹಲ್ಲೆ ನಡೆಸಿದ ಘಟನೆ ಪೆರಿಯಡ್ಕ ಸಮೀಪದ ಕೊಡಂಗೆ ಎಂಬಲ್ಲಿ ಶನಿವಾರ ನಡೆದಿದ್ದು, ಈ ಬಗ್ಗೆ ಇತ್ತಂಡಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ಕೊಡಂಗೆ ನಿವಾಸಿ ಪೂವಕ್ಕ (65) ಅವರು ತನಗೆ ಮನೆ ಸಮೀಪದ ರಾಜೇಶ್, ಆತನ ತಂದೆ ಬಾಬು ಗೌಡ ಹಾಗೂ ದೇಜಮ್ಮ ಎಂಬವರು ಹಲ್ಲೆ ನಡೆಸಿದ್ದು, ಕತ್ತಿಯನ್ನು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಪೂವಕ್ಕ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರಾಜೇಶ್ ಕೂಡಾ ಪ್ರತ್ಯೇಕ ದೂರು ನೀಡಿದ್ದು, ತನಗೆ ಶರತ್, ಸಚಿನ್, ಜಗದೀಶ್, ಹರೀಶ ಹಾಗೂ ನಿತಿನ್ ಎಂಬವರು ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತಂಡಗಳ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





