ಭಾರತ-ಬಾಂಗ್ಲಾದೇಶ ಮೊದಲ ಟಿ-20ಗೆ ದೀಪಾವಳಿಯ ವಾಯುಮಾಲಿನ್ಯದ ಆತಂಕ
ಹೊಸದಿಲ್ಲಿ, ಅ.26: ಭಾರತ ಹಾಗೂ ಬಾಂಗ್ಲಾದೇಶದ ಮಧ್ಯೆ ನ.3ರಂದು ದಿಲ್ಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯಕ್ಕೆ ರಾಜ್ಯ ರಾಜಧಾನಿಯನ್ನು ಕಾಡುತ್ತಿರುವ ವಾಯು ಮಾಲಿನ್ಯ ಸಮಸ್ಯೆ ಚಿಂತೆಗೆ ಕಾರಣವಾಗಿದೆ.
2017ರ ಡಿಸೆಂಬರ್‌ನಲ್ಲಿ ಕೋಟ್ಲಾ ಸ್ಟೇಡಿಯಂನ ವಾಯುಮಾಲಿನ್ಯದಿಂದಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ಉಸಿರಾಟದ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಹೆಚ್ಚಿನ ಆಟಗಾರರು ಮಾಸ್ಕ್ ಧರಿಸಿ ಆಡಿದ್ದರು. ಬಿಸಿಸಿಐ ಪಾಲಿಸುತ್ತಿರುವ ಆವರ್ತನ ನಿಯಮ ಹಾಗೂ ಪ್ರವಾಸಿ ತಂಡದ ಪ್ರಯಾಣದ ಹಾದಿಯನ್ವಯ ಬಾಂಗ್ಲಾದೇಶ ತಂಡದ ಭಾರತ ಪ್ರವಾಸದ ಮೊದಲ ಪಂದ್ಯವನ್ನು ದಿಲ್ಲಿಯಲ್ಲಿ ಆಯೋಜಿಸಲಾಗಿದೆ. ದೀಪಾವಳಿಗೆ ಕೆಲವೇ ದಿನಗಳ ಮೊದಲು ವಾಯು ಗುಣಮಟ್ಟದ ಸೂಚ್ಯಂಕ ದಿಲ್ಲಿಯ ವಾತಾವರಣ ಕೆಟ್ಟದಾಗಿದೆ ಎಂದಿತ್ತು. ವಾಯು ಮಾಲಿನ್ಯ ನಮ್ಮ ಹಿಡಿತಕ್ಕೆ ಸಿಗದ ವಿಚಾರವಾಗಿದೆ. ದೀಪಾವಳಿ ಮುಗಿದು ವಾರದ ಬಳಿಕ ನಡೆಯುವ ಪಂದ್ಯದ ವೇಳೆ ದಿಲ್ಲಿಯ ಪರಿಸ್ಥಿತಿ ಸುಧಾರಿಸಬಹುದು ಎಂದು ಬಿಸಿಸಿಐ ಹಾಗೂ ಡಿಡಿಸಿಎನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯಬಿದ್ದರೆ ಬಾಂಗ್ಲಾದೇಶ ತಂಡಕ್ಕೆ ಮುಖಗವಚ ಹಿಡಿದುಕೊಂಡು ಬರುವಂತೆ ಸೂಚಿಸಲಾಗುವುದು. ನೆರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರ್ಯಾಣದ ರೈತರಿಗೆ ಭತ್ತದ ಒಣಹುಲ್ಲನ್ನ್ನು ಸುಡದಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿರುವುದು ಮಾಲಿನ್ಯ ಕಡಿಮೆಗೊಳಿಸುವ ಸಾಧ್ಯತೆಯಿದೆ.





