ಟೆಸ್ಟ್ ಕ್ರಿಕೆಟ್‌ಗೆ 5 ಖಾಯಂ ಸ್ಥಳ: ಕೊಹ್ಲಿ ಸಲಹೆಗೆ ಕುಂಬ್ಳೆ ಸಹಮತ

ಹೊಸದಿಲ್ಲಿ, 26: ಕ್ರಿಕೆಟ್ ಸ್ಟೇಡಿಯಂನತ್ತ ಪ್ರೇಕ್ಷಕರನ್ನು ಮತ್ತೆ ಸೆಳೆಯುವ ಸಲುವಾಗಿ ಟೆಸ್ಟ್ ಪಂದ್ಯಗಳಿಗೆ ಐದು ಖಾಯಂ ಸೆಂಟರ್‌ಗಳಿರಬೇಕೆಂಬ ನಾಯಕ ವಿರಾಟ್ ಕೊಹ್ಲಿಯ ಸಲಹೆಗೆ ಭಾರತದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಸಹಮತ ವ್ಯಕ್ತಪಡಿಸಿದ್ದಾರೆ.
1980 ಹಾಗೂ 90ರ ದಶಕಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಹಬ್ಬಗಳ ಸಮಯದಲ್ಲಿ ಟೆಸ್ಟ್ ಕ್ರಿಕೆಟ್ ಆಯೋಜಿಸುವ ಸಂಪ್ರದಾಯಕ್ಕೆ ಬಿಸಿಸಿಐ ಹಿಂತಿರುಗಬೇಕು. ಪೊಂಗಲ್ ಹಬ್ಬದ ಸಮಯದಲ್ಲಿ ಚೆನ್ನೈನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದ ಸಂದರ್ಭ ನಮಗೆ ಈಗಲೂ ನೆನಪಿದೆ. ನನ್ನ ಪ್ರಕಾರ ಇದು ಟೆಸ್ಟ್ ಕ್ರಿಕೆಟ್‌ನ ಉತ್ತೇಜನಕ್ಕೆ ಒಂದು ಉತ್ತಮ ಮಾರ್ಗವಾಗಿದೆ. ಕೇವಲ ಕೆಲವೇ ಸ್ಥಳಗಳನ್ನು ಆಯ್ಕೆ ಮಾಡುವುದು ಮಾತ್ರವಲ್ಲ ಸಂದರ್ಭವನ್ನು ಗಮನಿಸಬೇಕು ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಭಾರತ-ದಕ್ಷಿಣ ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದಂತೆಯೇ ಟೆಸ್ಟ್ ಕ್ರಿಕೆಟ್ ಆಯೋಜಿಸಲು ಐದು ಖಾಯಂ ಸ್ಥಳಗಳನ್ನು ನಿಗದಿಪಡಿಸಲು ಇದು ಸಕಾಲ. ಮುಂಬರುವ ಸ್ವದೇಶಿ ಟೆಸ್ಟ್ ಪಂದ್ಯಗಳನ್ನು 5 ಖಾಯಂ ಟೆಸ್ಟ್ ಸೆಂಟರ್‌ಗಳಲ್ಲಿ ನಡೆಸುವಂತೆ ಸಲಹೆ ನೀಡಿದರು.







