ಕರಾವಳಿಯಲ್ಲಿ ದೀಪಾವಳಿ ಸಂಭ್ರಮವನ್ನು ಕಳೆಗುಂದಿಸುತ್ತಿರುವ ಕ್ಯಾರ್ ಚಂಡಮಾರುತ

ಮಂಗಳೂರು : ಗುರುವಾರದಿಂದಲೂ ಗೋವಾ, ಕರ್ನಾಟಕ ಮತ್ತು ಭಾಗಶಃ ಕೇರಳದಲ್ಲಿ ಭಾರೀ ಮಳೆಗೆ ಕಾರಣವಾಗಿರುವ ಕ್ಯಾರ್ ಚಂಡಮಾರುತ ಈಗ ಕರಾವಳಿ ಕರ್ನಾಟಕದಲ್ಲಿ ದೀಪಾವಳಿ ಸಂಭ್ರಮವನ್ನು ಕಸಿದುಕೊಳ್ಳಲು ಸಜ್ಜಾಗಿದೆ.
ಹವಾಮಾನ ಇಲಾಖೆಯು ಈ ಮೊದಲು ನಿರೀಕ್ಷಿಸಿದ್ದಂತೆ ಕ್ಯಾರ್ ಇನ್ನೂ ತನ್ನ ಕಾವು ಕಳೆದುಕೊಂಡಿಲ್ಲ. ರವಿವಾರ ಮತ್ತೆ ಭಾರೀಮಳೆಯನ್ನು ನಿರೀಕ್ಷಿಸಲಾಗಿದೆ.
ಶನಿವಾರ ಸಂಜೆಯ ವೇಳೆಗೆ ಚಂಡಮಾರುತವು ಒಮಾನ್‌ನತ್ತ ಸಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಭವಿಷ್ಯ ನುಡಿದಿದ್ದರು. ಆದರೆ ಶನಿವಾರ ರಾತ್ರಿಯೂ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಮುಂದುವರಿದಿದೆ.
ತನ್ನ ಹಿಂದಿನ ಅಂದಾಜುಗಳಿಗೆ ವಿರುದ್ಧವಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಕ್ಯಾರ್ ಚಂಡಮಾರುತವು ಮುಂದಿನ ಕೆಲವು ಗಂಟೆಗಳಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳಲಿದೆ ಎಂದು ಶನಿವಾರ ರಾತ್ರಿ ಪ್ರಕಟಿಸಿದೆ. ಕರಾವಳಿಯ ಹಲವು ಭಾಗಗಳಲ್ಲಿ ಮಧ್ಯಮದಿಂದ ಭಾರೀ ಮಳೆ ಮುಂದುವರಿಯಲಿದೆ ಮತ್ತು ಅಲ್ಲಲ್ಲಿ ಅತ್ಯಂತ ಭಾರೀ ಮಳೆ ಸುರಿಯಲಿದೆ ಎಂದು ಅದು ತಿಳಿಸಿದೆ.
ರವಿವಾರವೂ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು, ಕರಾವಳಿಯಲ್ಲಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಗಳಿವೆ. ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಶನಿವಾರದ ಸ್ಥಿತಿಯೇ ರವಿವಾರವೂ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.
ಆದರೆ ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ರವಿವಾರ ಇನ್ನಷ್ಟು ಹೆಚ್ಚಲಿದೆ ಎಂದು ಐಎಂಡಿ ನಿರೀಕ್ಷಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ.







