ನನಗೆ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ : ಡಿಕೆಶಿ

ಬೆಂಗಳೂರು, ಅ.27: ನನಗೆ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಬಿಪಿ ಕಂಟ್ರೋಲ್ ಆಗಿಲ್ಲ. ವಿಪರೀತ ಬೆನ್ನು ನೋವು ಇದೆ. ಹೀಗಾಗಿ ವೈದ್ಯರನ್ನು ಭೇಟಿಯಾಗಬೇಕಿದೆ . ನಿನ್ನೆ ಹೇಗೋ ಮ್ಯಾನೇಜ್ ಮಾಡಿಕೊಂಡು ಬಂದಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವ ನಗರದ ತಮ್ಮ ನಿವಾಸದಲ್ಲಿ ರವಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ " ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭ ಹಾರೈಸಿದರು. ಎಲ್ಲರೂ ಪಕ್ಷ ಮರೆತು ನನ್ನನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ, ಅವರೆಲ್ಲರಿಗೂ ಅಭಾರಿಯಾಗಿದ್ದೇನೆ. ಇಂದು ಹಲವರು ನನ್ನನ್ನು ಭೇಟಿಯಾಗುವುದಕ್ಕೆ ಬಂದಿದ್ದರು. ಅವರನ್ನು ಬರಬೇಡಿ ಎಂದು ಹೇಳುವುದಕ್ಕೆ ಆಗಲಿಲ್ಲ ಎಂದು ನುಡಿದರು.
ತನ್ನ ಪತ್ನಿ, ತಾಯಿ ವಿರುದ್ಧ ಪ್ರಕರಣ ದಿಲ್ಲಿ ಹೈಕೋರ್ಟ್ ನಲ್ಲಿದೆ. ವಕೀಲರು ಹೇಳಿದನ್ನು ಕೇಳಿದರೆ ಸಾಕಾಗುವುದಿಲ್ಲ. ಕಾನೂನು ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು
ನಾಳೆ ದೊಡ್ಡ ಆಲದಹಳ್ಳಿಗೆ ತಾಯಿಯವರನ್ನು ಭೇಟಿಯಾಗಲು ಹೋಗುವುದಾಗಿ ಡಿಕೆಶಿ ಮಾಹಿತಿ ನೀಡಿದರು. ಗೌರಿ ಹಬ್ಬದ ದಿನವೇ ತಂದೆಗೆ ಎಡೆ ಇಡುತ್ತೇವೆ. ಆದರೆ ಕಳೆದ ಗೌರಿ ಹಬ್ಬದ ದಿನ ಈ.ಡಿ. ವಿಚಾರಣೆ ಇರುವುದರಿಂದ ಅವಕಾಶ ಸಿಗಲಿಲ್ಲ. ನನ್ನ ಮಗ ಹಿರಿಯರಿಗೆ ಎಡೆ ಇಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಉಪಚುನಾವಣೆ ನಡೆಯುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಅನರ್ಹರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತದೆ ಎಂದು ಡಿಕೆಶಿ ಹೇಳಿದರು.







