ಮಾದಕ ವ್ಯಸನದ ವಿರುದ್ಧ ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ: ಒಂದು ವಾರದಲ್ಲಿ 34 ಪ್ರಕರಣ ದಾಖಲು
ಉಡುಪಿ : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸರು ಕಳೆದ ಒಂದು ವಾರದಿಂದ ಮಣಿಪಾಲ, ಉಡುಪಿ ನಗರ ಸಹಿತ ಜಿಲ್ಲೆಯ ಇತರ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಒಟ್ಟು 34 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, 34 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಮಣಿಪಾಲ ಠಾಣೆ ಪೊಲೀಸರು 10 ಪ್ರಕರಣಗಳನ್ನು, ಸೆನ್ ಅಪರಾಧ ಠಾಣಾ ಪೊಲೀಸರು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 18 ಪ್ರಕರಣಗಳನ್ನು ಹಾಗೂ ಪಡುಬಿದ್ರಿ ಠಾಣಾ ಪೊಲೀಸರು 2, ಶಿರ್ವಾ ಠಾಣಾ ಪೊಲೀಸರು 4 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಮಣಿಪಾಲ ಪೊಲೀಸರು ದಾಖಲಿಸಿದ 10 ಪ್ರಕರಣಗಳಲ್ಲಿ 5 ಪ್ರಕರಣ ಹಾಗೂ ಸೆನ್ ಅಪರಾಧ ಠಾಣಾ ಪೊಲೀಸರು ದಾಖಲಿಸಿದ 18 ಪ್ರಕರಣಗಳ ಪೈಕಿ 17 ಪ್ರಕರಣ, ಒಟ್ಟಾರೆಯಾಗಿ 34 ಪ್ರಕರಣಗಳಲ್ಲಿ 22 ಪ್ರಕರಣಗಳಲ್ಲಿ ವಿದ್ಯಾರ್ಥಿಗಳೇ ಭಾಗಿಯಾಗಿದ್ದಾರೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಯುವ ಜನಾಂಗವು ಈ ರೀತಿ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಶೋಚನೀಯವಾಗಿದ್ದು, ಪಾಲಕರು, ಪೋಷಕರು ತಮ್ಮ ಮಕ್ಕಳ ಚಲನ ವಲನದ ಬಗ್ಗೆ ನಿಗಾ ಇಡಬೇಕಯ. ಸಾರ್ವಜನಿಕರು ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಪೊಲೀಸರಿಗೆ ಗುಪ್ತವಾಗಿ ಮಾಹಿತಿ ನೀಡಿ, ಸ್ವಸ್ಥ ಸಮಾಜವನ್ನು ಕಟ್ಟಲು ಸಹಕರಿಸಬೇಕು. ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು, ಹಲವಾರು ಕಾರ್ಯಾಗಾರಗಳನ್ನು ಶಾಲಾ / ಕಾಲೇಜುಗಳಲ್ಲಿ ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿದೆ ಹಾಗೂ ಮುಂದೆ ಕೂಡ ನಡೆಸಿಕೊಂಡು ಹೋಗಲಿದೆ. ಮಾದಕ ವ್ಯಸನದ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







