'ನಮ್ಮದೇ ಏಕೈಕ ದೊಡ್ಡ ಪಕ್ಷ': 50:50 ಬೇಡಿಕೆಯಿಟ್ಟ ಶಿವಸೇನೆಗೆ ಫಡ್ನವೀಸ್ ಪ್ರತಿಕ್ರಿಯೆ

ಮುಂಬೈ, ಅ.27: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಸ್ಥಿರ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದಾರೆ.
ದೀಪಾವಳಿ ಬಳಿಕ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರು ಆಯೋಜಿಸಿದ್ದ ದೀಪಾವಳಿ ಸಮಾವೇಶದಲ್ಲಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು. ಸ್ಪಷ್ಟಬಹುಮತಕ್ಕೆ 144 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ 105 ಸ್ಥಾನಗಳನ್ನು ಗೆದ್ದಿತ್ತು. ಶಿವಸೇನೆ 56 ಸ್ಥಾನ ಪಡೆದಿದೆ. ಅಧಿಕಾರ ಹಂಚಿಕೆಗಾಗಿ 50:50 ಸೂತ್ರದ ಬಗ್ಗೆ ಲಿಖಿತ ಭರವಸೆ ನೀಡುವಂತೆ ಶಿವಸೇನೆ ಆಗ್ರಹಿಸಿದೆ.
"ಬಿಜೆಪಿ, ಶಿವಸೇನೆ, ಆರ್ ಪಿಐ, ಆರ್‍ಎಸ್‍ಪಿ, ಶಿವಸಂಗ್ರಾಮಗಳಿಗೆ ಸ್ಪಷ್ಟಬಹುಮತದ ಜನಾದೇಶ ಸಿಕ್ಕಿದೆ. ಈ ಜನಾದೇಶವನ್ನು ಗೌರವಿಸಲಾಗುತ್ತದೆ. ಯಾರೂ ಸಂದೇಹಪಡುವ ಅಗತ್ಯವಿಲ್ಲ"
"ಜನಾದೇಶದ ಪ್ರಕಾರ ಬಿಜೆಪಿ ಏಕೈಕ ದೊಡ್ಡ ಪಕ್ಷ. ದೀಪಾವಳಿ ಬಳಿಕ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿ ಸರ್ಕಾರದ ಪ್ರಮಾಣವಚನಕ್ಕೆ ಸಿದ್ಧತೆ ಮಾಡಿಕೊಳ್ಳಲಿದೆ" ಎಂದು ಸ್ಪಷ್ಟಪಡಿಸಿದರು. ಸ್ಪರ್ಧಿಸಿದ ಒಟ್ಟು ಸ್ಥಾನಗಳಿಗೆ ಹೋಲಿಸಿದರೆ ಬಿಜೆಪಿ ಗೆಲುವಿನ ಪ್ರಮಾಣ 2014ರ ಚುನಾವಣೆಗಿಂತ ಉತ್ತಮ ಎಂದು ಅವರು ಪ್ರತಿಪಾದಿಸಿದರು.







