370ನೆ ವಿಧಿ ರದ್ದತಿ ನಂತರ ಕಾಶ್ಮೀರದ ಆರ್ಥಿಕತೆಗೆ 10 ಸಾವಿರ ಕೋಟಿ ರೂ. ನಷ್ಟ

ಶ್ರೀನಗರ, ಅ.27: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ ಕಾಶ್ಮೀರದ ಜನಜೀವನ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ರಾಜ್ಯದ ಆರ್ಥಿಕತೆಗೆ ಸುಮಾರು 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಹೊಡೆತ ಬಿದ್ದಿದೆ.
ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿ 84 ದಿನಗಳು ಕಳೆದಿದ್ದು, ಪ್ರಮುಖ ಮಾರುಕಟ್ಟೆಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇನ್ನೂ ಪುನಾರಂಭವಾಗಿಲ್ಲ. ನಗರದ ಕೇಂದ್ರ ಭಾಗ ಲಾಲ್ ಚೌಕ್ ಸೇರಿದಂತೆ ಕೆಲ ಪ್ರದೇಶಗಳ, ಕೆಲ ಮಳಿಗೆಗಳು ಮುಂಜಾನೆ ಹಾಗೂ ಸಂಜೆ ವೇಳೆಗೆ ಮಾತ್ರ ತೆರೆಯುತ್ತವೆ. ಉಳಿದಂತೆ ಇಡೀ ಮಾರುಕಟ್ಟೆ ಮುಚ್ಚಿರುತ್ತದೆ.
ಜನಜೀವನ ಇನ್ನೂ ಸಾಮಾನ್ಯ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಹಾನಿಯನ್ನು ಅಂದಾಜಿಸುವುದು ಕಷ್ಟಸಾಧ್ಯ ಎಂದು ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ಶೇಖ್ ಆಶಿಕ್ ಹೇಳುತ್ತಾರೆ. ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು, ಚೇತರಿಸಿಕೊಳ್ಳುವುದು ಕಷ್ಟ ಎನ್ನುವುದು ಅವರ ಅಭಿಮತ.
"ಈ ಅವಧಿಯಲ್ಲಿ ಆಗಿರುವ ವಹಿವಾಟು ನಷ್ಟದ ಪ್ರಮಾಣ 10 ಸಾವಿರ ಕೋಟಿ ರೂಪಾಯಿ ದಾಟಿದೆ. ಎಲ್ಲ ವಲಯಗಳಿಗೂ ತೀವ್ರ ಹೊಡೆತ ಬಿದ್ದಿದೆ. ಸುಮಾರು ಮೂರು ತಿಂಗಲೀಮದ ಜನ ಯಾವುದೇ ವಹಿವಾಟು ನಡೆಸುತ್ತಿಲ್ಲ. ಇತ್ತೀಚಿನ ವಾರಗಳಲ್ಲಿ ಸ್ವಲ್ಪ ಚಟುವಟಿಕೆಗಳು ನಡೆದಿದ್ದರೂ, ವಹಿವಾಟು ತೀರಾ ಕಡಿಮೆ ಎಂಬ ಅಭಿಪ್ರಾಯ ವ್ಯಾಪಾರಿಗಳಿಂದ ಬರುತ್ತಿದೆ" ಎಂದವರು ಹೇಳಿದ್ದಾರೆ.
ಇಂಟರ್‍ನೆಟ್ ಸೇವೆ ರದ್ದುಪಡಿಸಿರುವುದು ನಷ್ಟಕ್ಕೆ ಪ್ರಮುಖ ಕಾರಣ ಎಂದು ಹೇಳುತ್ತಾರೆ. "ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸೀಸನ್‍ಗಾಗಿ ಜುಲೈ- ಆಗಸ್ಟ್‍ನಲ್ಲಿ ಸಾಮಾನ್ಯವಾಗಿ ಕುಶಲಕರ್ಮಿಗಳಿಗೆ ಕರಕುಶಲ ಕಲೆಗಳಿಗಾಗಿ ಬೇಡಿಕೆ ಕಾರ್ಯಾದೇಶ ಬರುತ್ತದೆ. ಆದರೆ ಇಂಟರ್‍ನೆಟ್ ಸೇವೆ ಇಲ್ಲದೇ ಈ ಬಾರಿ ಬಹಳಷ್ಟು ಹೊಡೆತ ಬಿದ್ದಿದೆ" ಎಂದು ವಿವರಿಸುತ್ತಾರೆ.







