ನಮ್ಮ ಬಳಿ ಅಧಿಕಾರದ ರಿಮೋಟ್ ಕಂಟ್ರೋಲ್ ಇದೆ :ಬಿಜೆಪಿಗೆ ಶಿವಸೇನೆ

ಮುಂಬೈ : ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆ ಕುರಿತಂತೆ ಮಿತ್ರ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆ ನಡುವೆ ಹಗ್ಗಜಗ್ಗಾಟ ರವಿವಾರವೂ ಮುಂದುವರಿದಿದೆ. ತಮ್ಮ ಪಕ್ಷ 2014ಗೆ ಹೋಲಿಸಿದಾಗ ಈ ಬಾರಿ ಕಡಿಮೆ ಸ್ಥಾನಗಳನ್ನು ಗಳಿಸಿದ್ದರೂ ''ಅಧಿಕಾರದ ರಿಮೋಟ್ ಕಂಟ್ರೋಲ್'' ತಮ್ಮ ಪಕ್ಷದ ಬಳಿಯಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
''ಶಿವಸೇನೆ ಬಿಜೆಪಿಯ ಹಿಂದೆ ಸುತ್ತುವುದು ಎಂಬ ಕನಸು ಭಗ್ನವಾಗಿದೆ. ಹುಲಿಯೊಂದು (ಶಿವಸೇನೆಯ ಗುರುತು) ಕೈಯ್ಯಲ್ಲಿ ತಾವರೆ (ಬಿಜೆಪಿ ಚಿಹ್ನೆ) ಹಿಡಿದು ನಿಂತಿರುವ ವ್ಯಂಗ್ಯಚಿತ್ರ ಈಗಿನ ಸನ್ನಿವೇಶದ ಬಗ್ಗೆ ಸಾಕಷ್ಟು ಹೇಳುತ್ತದೆ, ಯಾರನ್ನೂ ಹಗುರವಾಗಿ ಪರಿಗಣಿಸಲಾಗದು ಎಂಬುದು ಇದರ ಸಂದೇಶ'' ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿನ ತಮ್ಮ ಅಂಕಣದಲ್ಲಿ ರಾವತ್ ಬರೆದಿದ್ದಾರೆ.
ಶಿವಸೇನೆಯ ನಾಯಕತ್ವ ಕಾರ್ಯನಿರ್ವಹಿಸುವ ರೀತಿಯನ್ನು 'ರಿಮೋಟ್ ಕಂಟ್ರೋಲ್' ಪದ ಬಳಸಿ ಸೇನೆಯ ಸ್ಥಾಪಕ ಬಾಳ್ ಠಾಕ್ರೆ 1995-1999 ಅವಧಿಯ ಶಿವಸೇನೆ-ಬಿಜೆಪಿ ಸರಕಾರದ ಅವಧಿಯಲ್ಲಿ ಆಗಾಗ ಹೇಳುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಈ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ಶಿವಸೇನೆಯು ಆಡಳಿತದಲ್ಲಿ 50-50 ಸೂತ್ರ ಅನುಸರಿಸುವಂತೆ ಒತ್ತಡ ಹೇರುತ್ತಿದೆ.





