ಹಾಸ್ಟೆಲ್ ವಾರ್ಡನ್ ನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಬಾಲಕ ಮೃತ್ಯು

ಹಾವೇರಿ, ಅ.27: ಇಲ್ಲಿನ ಹಾನಗಲ್ ಪಟ್ಟಣದಲ್ಲಿ ಹಾಸ್ಟೆಲ್ ವಾರ್ಡನ್‍ನಿಂದ ಹಲ್ಲೆಗೆ ಒಳಗಾಗಿದ್ದ ಎನ್ನಲಾದ ಒಂಬತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಮೃತ ಬಾಲಕನನ್ನು ವಿಜಯ್ ಕುಮಾರ್ ಹಿರೇಮಠ ಎಂದು ಪೊಲೀಸರು ಗುರುತಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ವಿಜಯ್ ಕುಮಾರ್ ನನ್ನು ಹಾನಗಲ್ ಪಟ್ಟಣದ ಹಾಸ್ಟೆಲ್ ಗೆ ಸೇರಿಸಲಾಗಿತ್ತು. ಸಪ್ಟೆಂಬರ್ 3 ರಂದು ವಾರ್ಡನ್ ಶ್ರವಣಕುಮಾರ್ ಪೆನ್ಸಿಲ್ ವಿಚಾರವಾಗಿ ಬಾಲಕನನ್ನು ಥಳಿಸಿದ್ದ ಎಂದು ಹೇಳಲಾಗುತ್ತಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯವಾಗಿದ್ದ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ, ವಾರ್ಡನ್ ಬಾಲಕನ ಹೊಟ್ಟೆ ಭಾಗಕ್ಕೆ ಒದ್ದಿದ್ದ ಭಾಗ ಊದಿಕೊಂಡ ಕಾರಣ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಜಯ್ ಕುಮಾರ್ ರವಿವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ವಾರ್ಡನ್ ಶ್ರವಣಕುಮಾರ್ ಪತ್ತೆಗಾಗಿ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.





