ಉಳ್ಳಾಲದ ಈ ಯುವಕನ ಹಾಡಿಗೆ 80 ಲಕ್ಷಕ್ಕೂ ಅಧಿಕ ಮಂದಿ ಫಿದಾ !

ಮಂಗಳೂರು, ಅ. 27: ತಿಂಗಳ ಹಿಂದೆ ಉಳ್ಳಾಲದ ಈ ಯುವಕ ಹಾಡಿದ ಹಾಡಿಗೆ ಇಷ್ಟೊಂದು ಜನರು ಫಿದಾ ಆದಾರು ಎಂದು ಸ್ವತಃ ಈ ಯುವಕ ಭಾವಿಸಿರಲಿಲ್ಲ. ಆದರೆ, ದಿನದಿಂದ ದಿನಕ್ಕೆ ಈ ಹಾಡಿಗೆ ಜನರು ಮರಳಾಗುತ್ತಿದ್ದು, ರವಿವಾರ ಮಧ್ಯಾಹ್ನದವರೆಗೆ ಇದನ್ನು 80 ಲಕ್ಷಕ್ಕೂ ಅಧಿಕ ಮಂದಿ ಯೂ ಟ್ಯೂಬ್‌ನಲ್ಲಿ ವೀಕ್ಷಿಸಿದ್ದು, ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಉಳ್ಳಾಲ ಸುಭಾಷ್‌ನಗರದ ಅರ್ಫಾಝ್ ಉಳ್ಳಾಲ್ ಎಂಬ 21ರ ಹರೆಯದ ಯುವಕನೇ ಸಂಗೀತಪ್ರೇಮಿಗಳ ಮನ ಗೆದ್ದಾತ. ಅರ್ಜಿತ್ ಸಿಂಗ್‌ರ ಬಢೆ ಪಚ್‌ತಾವೊಗೆ ಹಾಡಿನ ಕನ್ನಡ ವರ್ಷನ್ ‘ಮೋಸಗಾತಿಯೇ’ ಹಾಡನ್ನು ಅರ್ಫಾಝ್ ಉಳ್ಳಾಲ್ ಹಾಡಿದ್ದರು. ಮೊದಲು ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗದಿದ್ದರೂ ತಿಂಗಳಾಗುತ್ತಲೇ ಈ ಹಾಡಿಗೆ ಯೂ ಟ್ಯೂಬ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗತೊಡಗಿತು.
ಉಳ್ಳಾಲದ ಭಾರತ್ ಹೈಸ್ಕೂಲ್‌ನಲ್ಲಿ ದ್ವಿತೀಯ ಪಿಯು ಮುಗಿಸಿ ಇದೀಗ ಬೆಂಗಳೂರಿಗೆ ಬದುಕು ಅರಸಿಕೊಂಡು ಹೋಗಿರುವ ಅರ್ಫಾಝ್‌ಗೆ ಬಾಲ್ಯದಿಂದಲೇ ಹಾಡುವುದು ಅಂದರೆ ತುಂಬಾ ಇಷ್ಟ. ಹಾಗೇ ಬೆಂಗಳೂರಿನಲ್ಲಿ ಕನ್ನಡದ ಹಾಡುಗಳನ್ನು ಹಾಡುವ ಅವಕಾಶಗಳನ್ನು ಬಳಸಿಕೊಂಡ ಅರ್ಫಾಝ್ ಕಳೆದ ಎರಡು ವರ್ಷಗಳಿಂದ ಯೂಟ್ಯೂಬ್‌ನಲ್ಲಿ ಸ್ನೇಹಿತರ ಜೊತೆಗೂಡಿ ಹಾಡುಗಳ ವೀಡಿಯೊವನ್ನು ಅಪ್ಲೋಡ್ ಮಾಡುತ್ತಿದ್ದರು. ಅದರಂತೆ ಸುಮಾರು 25ಕ್ಕೂ ಅಧಿಕ ಆಲ್ಬಂ ಸಾಂಗ್‌ಗಳನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ, ‘ಮೋಸಗಾತಿಯೇ’ ಹಾಡಿಗೆ ಸಿಕ್ಕ ಸ್ಪಂದನೆ ಬೇರೆ ಯಾವ ಹಾಡಿಗೂ ಸಿಕ್ಕಿಲ್ಲ ಎಂದು ಅರ್ಫಾಝ್ ಹೇಳುತ್ತಾರೆ. ಸಾಧು ಕೋಕಿಲರಂತಹ ಕಲಾವಿದರು ತನ್ನ ಹಾಡನ್ನು ಮೆಚ್ಚಿರುವುದರಿಂದ ಅರ್ಫಾಝ್‌ರ ಉತ್ಸಾಹ ಹೆಚ್ಚಿದೆ.
ಬೆಂಗಳೂರಿನಲ್ಲಿದ್ದರೂ ಕೂಡ ಮಂಗಳೂರಿಗೆ ಆಗಾಗ ಬಂದು ಹಾಡು ರೆಕಾರ್ಡಿಂಗ್ ಮಾಡುತ್ತಿದ್ದರು. ಅಂದರೆ ಅಡ್ಯಾರ್ ಕಣ್ಣೂರಿನ ಕ್ಲಾಸಿಕ್ ಮೀಡಿಯಾದಲ್ಲಿ ಹಾಡನ್ನು ರೆಕಾರ್ಡಿಂಗ್ ಮಾಡುತ್ತಿದ್ದರು. ಬಳಿಕ ಯೂ ಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಈಗಾಗಲೆ 80 ಲಕ್ಷಕ್ಕೂ ಅಧಿಕ ಜನರ ಮೆಚ್ಚುಗೆಗೆ ಪಾತ್ರರಾಗಿರುವ ‘ಮೋಸಗಾತಿಯೇ’ ಹಾಡಿಗೆ ಕಣ್ಣೂರಿನ ಶಬಾಝ್ ಸಾಹಿತ್ಯ ರಚಿಸಿದ್ದರು. ನಿತಿನ್ ಶಂಕರಘಟ್ಟ ಇದನ್ನು ನಿರ್ಮಿಸಿದ್ದರು.
ಬ್ರೇಕ್ ನೀಡಿದ ಬಢೆ ಪಚ್‌ತಾವೊ
‘ಬಢೆ ಪಚ್‌ತಾವೋಗೆ’ ಹಾಡು ತನಗೆ ಹೊಸ ದಾರಿಯನ್ನೇ ತೆರೆದುಕೊಟ್ಟಿದೆ. ತನ್ನ ನಿರೀಕ್ಷೆಗೂ ಮೀರಿ ಈ ಹಾಡಿಗೆ ಸ್ಪಂದನೆ ಸಿಕ್ಕಿದೆ. ಅದರಂತೆ ಉಪ್ಪಾರಿ ರಮೇಶ್ ನಿರ್ದೇಶನದ ‘ನಾನ್ ಒಂಥರಾ’ ಸಿನೆಮಾದ ಹಾಡಿನ ರೆಕಾರ್ಡಿಂಗ್ ಮುಗಿಸಿದ್ದೇನೆ. ಸಿನೆಮಾ ರಂಗದಿಂದ ಆಹ್ವಾನಗಳು ಬರುತ್ತಿವೆ. ಇದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ಅರ್ಫಾಝ್ ಉಳ್ಳಾಲ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.







