ಬೌದ್ಧ ಧರ್ಮ ನಾಶ ಪಡಿಸಲು ಮಹಾ ಕುತಂತ್ರ: ಪ್ರೊ.ಕೆ.ಎಸ್ ಭಗವಾನ್

ಮೈಸೂರು, ಅ.27: ಚಾತುರ್ವಣ ಪರಿಪಾಲಕರು ಉದ್ದೇಶ ಪೂರ್ವವಕವಾಗಿ ಬೌದ್ಧ ಧರ್ಮ ನಾಶ ಪಡಿಸಲು ಮಹಾ ಕುತಂತ್ರ ನಡೆಸಿ ಮಹಿಷ ಚಕ್ರವರ್ತಿ ಬಗ್ಗೆ ಕೆಟ್ಟ ಕೆಟ್ಟ ಅಭಿಪ್ರಾಯವನ್ನು ಹುಟ್ಟುಹಾಕಿದ್ದಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ರವಿವಾರ ಪುಷ್ಪಾರ್ಚನೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಜನಪದ ಚಕ್ರವರ್ತಿ ಮಹಿಷ ರಾಜ್ಯಭಾರ ನಡುಸುತ್ತಿದ್ದ ನಾಡಿನಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಸಾಮ್ರಾಟ್ ಅಶೋಕ ಚಕ್ರವರ್ತಿ ಬೌದ್ಧ ಬಿಕ್ಕು ಮಹದೇವ ಕೇರನನ್ನು ಕಳುಹಿಸುತ್ತಾರೆ. ಆ ಸಂದರ್ಭದಲ್ಲಿ ಚಾತುವರ್ಣ ಪರಿಪಾಲಕರು ಬೌದ್ಧ ಧರ್ಮವನ್ನು ನಾಶಪಡಿಸಲು ಉದ್ದೇಶಪೂರ್ವಕವಾಗಿ ಮಹಿಷನ ಬಗ್ಗೆ ಅಪಪ್ರಚಾರ ಮಾಡಿ ರಾಕ್ಷಸಪಟ್ಟ ಕಟ್ಟಿದ್ದಾರೆ ಎಂದು ಹೇಳಿದರು.
ಮಹಿಷ ಕೆಟ್ಟವನೇ ಆಗಿದ್ದರೆ ಒಂದು ಪ್ರದೇಶಕ್ಕೆ ಆತನ ಹೆಸರಿಡಲು ಸಾಧ್ಯವೆ ಎಂದು ಪ್ರಶ್ನಿಸಿದ ಭಗವಾನ್, ಬೌದ್ಧ ಧರ್ಮವನ್ನು ಇಡೀ ಪ್ರಪಂಚದ ಮಹಾಜ್ಞಾನಿಗಳೆಲ್ಲ ಒಪ್ಪಿಕೊಂಡಿರುವ ಹಾಗೆ ಸ್ವಾಮಿ ವಿವೇಕಾನಂದರು, ನೊಬೆಲ್ ಪ್ರಶಸ್ತಿ ಪಡೆದ ಬರಶಲ್ ವೆಸಲ್, ಐನ್ ಸ್ಟೀನ್ ಬುದ್ಧ ಧಮ್ಮ ಅತ್ಯಂತ ಶ್ರೇಷ್ಠ, ವೈಜ್ಞಾನಿಕ ಮತ್ತು ಮಾನವೀಯ ಧರ್ಮ ಎಂದು ಕೊಂಡಾಡಿದ್ದಾರೆ ಎಂದರು.
ಹಲವಾರು ಐತಿಹಾಸಿಕ ದಾಖಲೆಗಳನ್ನು ಮರೆಮಾಚಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಪ್ರಾಚೀನ ಇತಿಹಾಸವನ್ನು ದಂತಕಥೆಯನ್ನಾಗಿ ಮಾಡಿದ್ದಾರೆ. ಇದು ಎಲ್ಲರಿಗೂ ಮನರಂಜನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಯಾರ ಭಾವನೆಗೂ ಧಕ್ಕೆ ಉಂಟು ಮಾಡಲು ಈ ಅಚರಣೆ ಮಾಡುತ್ತಿಲ್ಲ. ಚಾಮುಂಡೇಶ್ವರಿಗೆ ಅವಮಾನ ಮಾಡಿದರೆ ನಮಗೇನು ಲಾಭ, ನಾವು ಯಾರಿಗೂ ತೊಂದರೆ ನೀಡದೆ ನಮ್ಮ ಆಚರಣೆಯನ್ನು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಸಾಹಿತಿ ಸಿದ್ದಸ್ವಾಮಿ, ಶಿವಸ್ವಾಮಿ, ಪ್ರೊ.ಟಿ.ಎಂ.ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







