ಎನ್ಎಂಪಿಟಿ ಬಳಿ ವಾಲಿದ ಡ್ರೆಜ್ಜರ್ !
ಮಂಗಳೂರು, ಅ.28: ಎನ್ಎಂಪಿಟಿ ಬಳಿಯ ಅರಬ್ಬೀ ಸಮುದ್ರದಲ್ಲಿ ಡ್ರೆಜ್ಜರ್ನ ಆ್ಯಂಕರ್ ತುಂಡಾಗಿ ವಾಲಿದ ಘಟನೆ ಸೋಮವಾರ ನಡೆದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದರೂ ತಕ್ಷಣ ಕಾರ್ಯಾಚರಣೆಗಿಳಿದ ಎನ್ಎಂಪಿಟಿ ಅಧಿಕಾರಿಗಳು ಕೋಸ್ಟ್ ಗಾರ್ಡ್ನ ಸಹಕಾರದಿಂದ ಟಗ್ಗಳ ಮೂಲಕ ಡ್ರೆಜ್ಜರ್ನ್ನು ಮರಳಿ ಸುಸ್ಥಿತಿಗೆ ತಂದಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಡ್ರೆಜ್ಜರ್ನ್ನು ಸಮುದ್ರ ಮಧ್ಯೆ ಲಂಗರು ಹಾಕಲು ಉಪಯೋಗಿಸುವ ಸಂದರ್ಭ ಅದರ ದೊಡ್ಡ ಆಂಕರ್ ತುಂಡಾಗಿ ಡ್ರೆಜ್ಜರ್ ತೇಲಾಡತೊಡಗಿತ್ತು. ಇದರಲ್ಲಿದ್ದ ಸುಮಾರು 15 ಕಾರ್ಮಿಕರು ಭಯಭೀತರಾಗಿದ್ದರು. ವಿಷಯ ತಿಳಿದ ಎನ್ಎಂಪಿಟಿ ಅಧಿಕಾರಿಗಳು ತನ್ನ ಟಗ್ಗಳನ್ನು ಸಮುದ್ರಕ್ಕೆ ಕಳುಹಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ದುರ್ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
Next Story