ವಿವಾದದ ನಂತರ ಪ್ರಧಾನಿಯನ್ನು ಹೊಗಳಿದ್ದ ಟ್ವೀಟ್ ಡಿಲಿಟ್ ಮಾಡಿದ ಮೇರಿ ಕೋಮ್, ಗೀತಾ ಫೋಗಟ್

ಹೊಸದಿಲ್ಲಿ, ಅ.28: ಪ್ರಧಾನಿ ಮೋದಿಯನ್ನು ಹೊಗಳಿದ್ದ ಒಂದೇ ರೀತಿಯ ಟ್ವೀಟ್ ವಿಚಾರ ವಿವಾದ ಸೃಷ್ಟಿಸಿ ಭಾರೀ ಟೀಕೆಗೆ ಗುರಿಯಾದ ನಂತರ ಬಾಕ್ಸರ್ ಮೇರಿ ಕೋಮ್, ಕುಸ್ತಿಪಟು ಗೀತಾ ಫೋಗಟ್ ಸೇರಿ ಹಲವು ಮಹಿಳಾ ಅಥ್ಲೀಟ್ ಗಳು ಈ ಟ್ವೀಟ್ ಗಳನ್ನು ಡಿಲಿಟ್ ಮಾಡಿದ್ದಾರೆ.
ದೀಪಾವಳಿ ದಿನ ಮೇರಿ ಕೋಮ್, ಮನಿಕಾ ಬಾತ್ರಾ, ಸೈನಾ ನೆಹ್ವಾಲ್, ಪಿವಿ ಸಿಂಧು ಸೇರಿ ದೇಶದ ಅಗ್ರ ಮಹಿಳಾ ಕ್ರೀಡಾಪಟುಗಳು, "ಈ ದೀಪಾವಳಿ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸುವ, ಸಬಲೀಕರಿಸುವ ಕ್ರಮ ಕೈಗೊಂಡಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಈ ಗೌರವ ನಮಗೆ ಇನ್ನಷ್ಟು ಕಠಿಣವಾಗಿ ಶ್ರಮ ವಹಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಸ್ಫೂರ್ತಿಯಾಗಲಿದೆ. #bharatkilaxmi...." ಎಂದು ಟ್ವೀಟ್ ಮಾಡಿದ್ದರು.

ಆದರೆ ಈ ಎಲ್ಲಾ ಕ್ರೀಡಾಪಟುಗಳು ಒಂದೇ ಟ್ವೀಟನ್ನು ಕಾಪಿ-ಪೇಸ್ಟ್ ಮಾಡಿರುವುದು ನಂತರ ತಿಳಿದು ಬಂದಿದ್ದು, ವಿವಾದ ಸೃಷ್ಟಿಸಿತ್ತು. ಅದರಲ್ಲೂ ಕುಸ್ತಿಪಟು ಪೂಜಾ ಧಾಂಡಾ ಟ್ವೀಟನ್ನು ಹಾಗೆಯೇ ಪೇಸ್ಟ್ ಮಾಡಿದ್ದರಲ್ಲದೆ, 'ಟೆಕ್ಸ್ಟ್' ಎನ್ನುವ ಪದವೂ ಅವರ ಟ್ವೀಟ್ ನಲ್ಲಿತ್ತು.
ಪೂಜಾ ಧಾಂಡಾ ತಮ್ಮ ಟ್ವೀಟ್ ಡಿಲಿಟ್ ಮಾಡಿದ ನಂತರ ಮೇರಿ ಕೋಮ್ ಮತ್ತು ಗೀತಾ ಫೋಗಟ್ ಕೂಡ ಈ ಟ್ವೀಟ್ ಡಿಲಿಟ್ ಮಾಡಿದ್ದಾರೆ.







