ವೃದ್ಧರ ಕೊಲೆ ಪ್ರಕರಣ; ದಂಪತಿ ಬಂಧನ

ಬೆಂಗಳೂರು, ಅ.28: ಶ್ರೀಮಂತ ವೃದ್ಧರನ್ನೇ ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಬಂಧಿಸುವಲ್ಲಿ ಇಲ್ಲಿನ ಮಹದೇವಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಅಮೃತಹಳ್ಳಿ ನಿವಾಸಿಗಳಾದ ವೆಂಕಟೇಶ್ ಹಾಗೂ ಈತನ ಪತ್ನಿ ಅರ್ಪಿತಾ ಬಂಧಿತರು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅ.17ರಂದು ನಗರದ ಗರುಡಾಚಾರ್ ಪಾಳ್ಯದ ಚಂದ್ರೇಗೌಡ ಹಾಗೂ ಲಕ್ಷ್ಮಮ್ಮ ಎಂಬ ದಂಪತಿಯ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ದಂಪತಿಯನ್ನು ಬಂಧಿಸಿ ನಗದು ವಶಕ್ಕೆ ಪಡೆದಿದ್ದಾರೆ ಎಂದು ಅವರು ಹೇಳಿದರು.
ಬಂಧಿತರಾದ ವೆಂಕಟೇಶ್ ಹಾಗೂ ಅರ್ಪಿತಾ, ಗೆಳೆಯರ ಬಳಿ ಸುಮಾರು 10 ಲಕ್ಷ ರೂ. ಸಾಲ ಪಡೆದಿದ್ದರು. ಇದರ ಜೊತೆಗೆ ಸ್ವಂತ ಕಾರನ್ನು ಖರೀದಿಸಿ, ಐಷಾರಾಮಿ ಜೀವನ ಸಾಗಿಸಲು ಅವರು ಕಳ್ಳತನ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಮದುವೆ ಸಮಾರಂಭಗಳಲ್ಲಿ ಮಕ್ಕಳಿಲ್ಲದ ಶ್ರೀಮಂತ ವೃದ್ಧರನ್ನು ಪರಿಚಯಿಸಿಕೊಂಡು ನಂತರ ಅವರ ಮನೆಗೆ ಹೋಗಿ ಅವರೊಂದಿಗೆ ಸ್ನೇಹ ಬೆಳೆಸಿ, ಕೆಲ ಸಮಯದ ನಂತರ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದರು. ಸುಮಾರು 1 ತಿಂಗಳ ಹಿಂದೆ ಸಂಬಂಧಿಕರ ಮದುವೆಗೆ ಗರುಡಚಾರ್ ಪಾಳ್ಯದ ಚಂದ್ರೇಗೌಡ ಹಾಗೂ ಲಕ್ಷ್ಮಮ್ಮ ಹೋಗಿದ್ದರು. ಅದೇ ಮದುವೆಗೆ ಹೋಗಿದ್ದ ಆರೋಪಿಗಳು ಲಕ್ಷ್ಮಮ್ಮ ಧರಿಸಿದ್ದ ಚಿನ್ನಾಭರಣ ಕಂಡು, ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಬಳಿಕ ಅ.17ರಂದು, ಇವರ ಮನೆಗೆ ನುಗ್ಗಿ ಆರೋಪಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ದೋಚಿದ್ದ 305 ಗ್ರಾಂ ಚಿನ್ನಾಭರಣವನ್ನು ಮಾರಾಟ ಮಾಡಿ, ಇದರಿಂದಾಗಿ ಬಂದ ಹಣವನ್ನು ತೆಗೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮಿತ್ತಮಂಜಲ್ ಗ್ರಾಮದಲ್ಲಿದ್ದ ಗೌತಮ್ ಎಂಬಾತನ ಮನೆಯಲ್ಲಿ ತಲೆ ಮರೆಸಿಕೊಂಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.







